ಮುಂಬೈ: ನಾಳೆಯಿಂದ ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಹೊಸ ಮೈತ್ರಿ ಸರ್ಕಾರದ ಶಖೆ ಶುರುವಾಗಲಿದೆ. ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಿವಾಜಿ ಪಾರ್ಕ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಭರ್ಜರಿ ಸಿದ್ದತಾ ಕಾರ್ಯಗಳು ನಡೆಯುತ್ತಿವೆ. ಮೈತ್ರಿ ಪಕ್ಷಗಳಾದ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ನಡುವಿನ ಸಚಿವ ಸ್ಥಾನಗಳ ಹಂಚಿಕೆ ಬಹುತೇಕ ಅಂತಿಮ ರೂಪ ಪಡೆದುಕೊಂಡಿದ್ದು ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಸೇರಿದಂತೆ 15 ಸಚಿವ ಸ್ಥಾನ, ಎನ್ಸಿಪಿಗೆ ಉಪ ಮುಖ್ಯಮಂತ್ರಿ ಸ್ಥಾನ ಸೇರಿದಂತೆ 13 ಸಚಿವರು ಹಾಗೂ ಕಾಂಗ್ರೆಸ್ಗೆ ಸ್ಪೀಕರ್ ಸೇರಿ 13 ಸಚಿವ ಸ್ಥಾನ ಸಿಕ್ಕಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ, ಶರದ್ ಪವಾರ್ ಹಾಗೂ ಕಾಂಗ್ರೆಸ್ನ ಅಹ್ಮದ್ ಪಟೇಲ್ ಮಾತುಕತೆ ನಡೆಸಿದ್ದು, ಸರ್ವ ರೀತಿಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿರುವ 100 ರೈತ ಕುಟುಂಬಗಳಿಗೆ ಆಹ್ವಾನ ನೀಡಲಾಗಿದ್ದು,ಅವರಿಗೆ ಸನ್ಮಾನ ಮಾಡುವ ಸಾಧ್ಯತೆ ಇದೆ.