ನವದೆಹಲಿ: ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ಜನರಿಗೆ ಅಗತ್ಯ ವಸ್ತುಗಳಿಗೆ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ದೇಶಾದ್ಯಂತ ನಿರಂತರ ಹಾಲು ಸರಬರಾಜು ಮಾಡಲು ದಕ್ಷಿಣ ಮಧ್ಯ ರೈಲ್ವೆ 2.40 ಲಕ್ಷ ಲೀಟರ್ ಹಾಲು ತುಂಬಿರುವ 'ದೂಧ್ ದುರಂತೋ ಸ್ಪೆಷಲ್' ರೈಲನ್ನು ಶನಿವಾರ ಆರಂಭಿಸಿದೆ.
ಈ ಸೂಪರ್‌ಫಾಸ್ಟ್ ರೈಲು ಶನಿವಾರ ಬೆಳಗ್ಗೆ 8:00 ಗಂಟೆಗೆ ಆಂಧ್ರಪ್ರದೇಶದ ರೆನಿಗುಂಟಾ ನಿಲ್ದಾಣದಿಂದ ಹೊರಟಿದ್ದು, ಇಂದು ಸಂಜೆ 5:40ಕ್ಕೆ ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ತಲುಪಲಿದೆ.
ಈ ರೈಲು ಆರು ಹಾಲಿನ ಟ್ಯಾಂಕರ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ 40,000 ಲೀಟರ್ ಸಾಮರ್ಥ್ಯ ಹೊಂದಿದೆ. ಒಟ್ಟು ಆರು ಟ್ಯಾಂಕರ್ಗಳಲ್ಲಿ 2.40 ಲಕ್ಷ ಲೀಟರ್ ಹಾಲು ಇದೆ. ಹಾಲಿನ ಜೊತೆಗೆ ಈ ರೈಲು ರೆನಿಗುಂಟಾ ಮತ್ತು ಸಿಕಂದರಾಬಾದ್‌ನಿಂದ 23 ಟನ್ ಮಾವಿನಹಣ್ಣು ಮತ್ತು ಗುಂಟಕಲ್ನಿಂದ 23 ಟನ್ ಕಲ್ಲಂಗಡಿ ಹಣ್ಣನ್ನೂ ಹೊತ್ತೊಯ್ದಿದೆ.
ಏಪ್ರಿಲ್ 14ರವರೆಗೆ ಪ್ರಯಾಣಿಕರ ರೈಲು(passenger train)ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ, ರೈಲುಗಳ ಮೂಲಕ ಹಾಲು ಸರಬರಾಜನ್ನು ಇಲಾಖೆ ಮುಂದುವರಿಸಲು ನಿರ್ಧರಿಸಿದೆ. ಹಾಲಿಗೆ ಬೇಡಿಕೆ ಹೆಚ್ಚಿರುವುದರಿಂದಾಗಿ ಸಂಪೂರ್ಣ ಹಾಲಿನ ಟ್ಯಾಂಕರ್ ರೈಲನ್ನು ಓಡಿಸಲು ಇಲಾಖೆ ನಿರ್ಧರಿಸಿದೆ. ಇದರೊಂದಿಗೆ ಇತರ ಅಗತ್ಯ ಸರಕುಗಳನ್ನು ಹೊತ್ತ ಕೆಲವು ಬೋಗಿಗಳೂ ಇರಲಿವೆ.
ಈ ರೈಲುಗಳು ಯಾವುದೇ ರೀತಿಯ ನಿರ್ಬಂಧವಿಲ್ಲದೆ ಗಂಟೆಗೆ ಸರಾಸರಿ 110 ಕಿ.ಮೀ ವೇಗದಲ್ಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಸಮನಾಗಿ ಚಲಿಸುತ್ತವೆ. ಇದರಿಂದಾಗಿ ರೈಲು 36 ಗಂಟೆಗಳ ಒಳಗೆ ಗಮ್ಯಸ್ಥಾನವನ್ನು ತಲುಪುತ್ತದೆ. ಹಾಲು ಅಥವಾ ಇತರ ಉತ್ಪನ್ನಗಳನ್ನು ಲೋಡ್ ಮಾಡುವಾಗ ನೈರ್ಮಲ್ಯ, ಸಾಮಾಜಿಕ ಅಂತರ ಮೊದಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ರೈಲ್ವೆ ಇಲಾಖೆ ತೆಗೆದುಕೊಂಡಿದೆ.