ಹರಿಯಾಣ (ಗುರುಗ್ರಾಮ) : ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಗುರುಗ್ರಾಮವನ್ನು ವಿಜ್ಞಾನ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹರಿಯಾಣ ಸರ್ಕಾರ ತಿಳಿಸಿದೆ.
ಇಲ್ಲಿನ ಸುಮಾರು 30 ಎಕರೆ ಭೂಮಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಸೈನ್ಸ್ ಸಿಟಿಯನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಈ ಕುರಿತು ಮಾತನಾಡಿದ ಹರಿಯಾಣದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮಿತ್ ಜಾ, ಸೈನ್ಸ್ ಸಿಟಿ ಅಭಿವೃದ್ಧಿಯು ಈ ಭಾಗದ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಜೊತೆಗೆ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ವಿಚಾರಗಳನ್ನು ಕಲಿಯುವ ಅವಕಾಶ ಲಭಿಸಲಿದೆ ಎಂದು ವಿವರಿಸಿದರು.
ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಗುವುದು.ವಿಜ್ಞಾನ ಆವಿಷ್ಕಾರದ ಹೊಸ ಕೆಂದ್ರವನ್ನಾಗಿ ಇದನ್ನು ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳಿಗೆ ಅನುಗುಣವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಜಾ ತಿಳಿಸಿದರು.