ನವದೆಹಲಿ: ರೈತರ ಟ್ರಾಕ್ಟರ್ ರ‍್ಯಾಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ನ್ಯಾಯಾಂಗ ವಿಚಾರಣೆಗೆ ತಕ್ಷಣದ ನಿರ್ದೇಶನ ಕೋರಿ ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ನಾಳೆ ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್‌ನ ಪೀಠವು ಅರ್ಜಿಯನ್ನು ನಾಳೆ ಆಲಿಸಲಿದೆ.
ವಕೀಲ ತಿವಾರಿ ಅವರು ತಮ್ಮ ಅರ್ಜಿಯಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಹಾಗೂ ರಾಷ್ಟ್ರ ಧ್ವಜವನ್ನು ಅವಮಾನಿಸಿದವರ ವಿರುದ್ಧ ಎಫ್‌ಐಆರ್ ನೋಂದಣಿ ಕೋರಿ ಉಲ್ಲೇಖ ಮಾಡಿದ್ದಾರೆ.
ಗಣರಾಜ್ಯೋತ್ಸವದಂದು, ಪ್ರತಿಭಟನಾಕಾರರು ಮೊದಲೇ ನಿಗದಿಪಡಿಸಿದ ಮಾರ್ಗವನ್ನು ಅನುಸರಿಸಲಿಲ್ಲ ಬದಲಿಗೆ ದೆಹಲಿಗೆ ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ಮುರಿದು, ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಟ್ರಾಕ್ಟರ್ ರ‍್ಯಾಲಿ ಮುಖಾಂತರ ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿದ್ದರು.
ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧ ನವೆಂಬರ್ 26 ರಿಂದ ರೈತರು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.