ನವದೆಹಲಿ: ವೈಎಸ್ಆರ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು ಮುಂದಿನ 4 ವಾರಗಳಲ್ಲಿ ಎಲ್ಲ ಸರ್ಕಾರಿ ಕಟ್ಟಡಗಳ ಮೇಲಿನ ರಾಜಕೀಯ ಪಕ್ಷಗಳ ಬಣ್ಣವನ್ನು ತೆಗೆಯುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಪಂಚಾಯತ್ ಕಚೇರಿಗಳು ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ಬಣ್ಣ ಬಳಿಯುವ ವಿಚಾರದಲ್ಲಿ ಸರ್ಕಾರದ ಆದೇಶವನ್ನು (ಸರ್ಕಾರಿ ಆದೇಶ ಸಂಖ್ಯೆ-623) ಹೈಕೋರ್ಟ್ ರದ್ದುಪಡಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿ ವೈ.ಎಸ್.ಜಗನ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಕಟ್ಟಡಗಳು ಸಾರ್ವಜನಿಕ ಆಸ್ತಿಯಾಗಿವೆ, ಅವುಗಳ ಮೇಲೆ ಯಾವುದೇ ರಾಜಕೀಯ ಪಕ್ಷದ ಬಣ್ಣ ಬಳಿಯಲು ಅನುಮತಿ ಇಲ್ಲ ಎಂದು ಹೇಳಿದೆ.
ಏಪ್ರಿಲ್‌ನಲ್ಲಿ ಜಗನ್ ಸರ್ಕಾರ ಕಟ್ಟಡಗಳನ್ನು ಪೆಯಿಂಟ್ ಮಾಡುವ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿತ್ತು. ಈ ಆದೇಶವನ್ನು ಮೇ 22 ರಂದು ಹೈಕೋರ್ಟ್ ರದ್ದುಗೊಳಿಸಿತ್ತು.
ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಧ್ವಜ ಬಣ್ಣಗಳನ್ನು ಎಲ್ಲಾ ಸರ್ಕಾರಿ ಕಟ್ಟಡಗಳಿಂದ ಕೂಡಲೇ ತೆಗೆದುಹಾಕುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ನಂತರ ಸರ್ಕಾರ ಏಪ್ರಿಲ್‌ನಲ್ಲಿ ಜಿಒ-623 ಹೊರಡಿಸಿತ್ತು. ಹೊಸ ಆದೇಶದಲ್ಲಿ ಅಸ್ತಿತ್ವದಲ್ಲಿರುವ ಬಣ್ಣಗಳೊಂದಿಗೆ ಹೆಚ್ಚುವರಿ ಬಣ್ಣಗಳನ್ನು ಸೇರಿಸಲಾಗಿದೆ.
ಆದರೆ, ಹೈಕೋರ್ಟ್ ಈ ವಿಷಯದ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ತೆಗೆದುಕೊಂಡು ಮಾರ್ಪಡಿಸಿದ ಆದೇಶವನ್ನು ರದ್ದುಗೊಳಿಸಿತು. ವೈಎಸ್‌ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಲವಾರು ಸರ್ಕಾರಿ ಕಚೇರಿಗಳು, ಪಂಚಾಯತ್ ಕಚೇರಿಗಳು, ಅಂಗನವಾಡಿಗಳು, ಶಾಲಾ ಕಟ್ಟಡಗಳು, ವಾಟರ್ ಟ್ಯಾಂಕ್‌ಗಳು ಮತ್ತು ಇತರ ಸಾರ್ವಜನಿಕ ಕಟ್ಟಡಗಳಿಗೆ ಆಡಳಿತ ಪಕ್ಷದ ಧ್ವಜದ ಬಣ್ಣ ಬಳಿಯಲಾಗಿದೆ.