ನವದೆಹಲಿ: ಪಶ್ಚಿಮ ಘಟ್ಟದ ಸಂಪೂರ್ಣ ಪ್ರದೇಶಗಳ ರಕ್ಷಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಹಾಗೂ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಪಶ್ಚಿಮ ಘಟ್ಟದ ಪರಿಸರ ವಿಜ್ಞಾನ ತಜ್ಞರ ಸಮಿತಿ ಶಿಫಾರಸಿನ ಪ್ರಕಾರ ಪಶ್ಚಿಮ ಘಟ್ಟದ ಎಲ್ಲ ಪ್ರದೇಶ ರಕ್ಷಣೆ ಮಾಡಲು ನಿರ್ದೇಶನ ಕೋರಿ ಮನವಿ ಸಲ್ಲಿಕೆ ಮಾಡಿತು. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಏಳು ಅಪ್ರಾಪ್ತ ವಯಸ್ಕರು, ನಾಲ್ಕು ಪರಿಸರ ಕಾರ್ಯಕರ್ತರು ಮತ್ತು 16 ವ್ಯಕ್ತಿಗಳು ಈ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ರಾಜ್ ಪಂಜವಾನಿ ಹಾಜರಾಗಿದ್ದರು.

ಅರ್ಜಿದಾರರ ಪ್ರಕಾರ ಪಶ್ಚಿಮ ಘಟ್ಟದಲ್ಲಿ ಸುಮಾರು 72,212 ಚದರ ಕಿ.ಮೀ ಅರಣ್ಯ ಸಂರಕ್ಷಿತ ಪ್ರದೇಶದಿಂದ ಹೊರಗಡೆ ಇಡಲಾಗಿದೆ ಎಂದು ಹೇಳಲಾಗಿದೆ. ಒಟ್ಟು 1,64,280 ಚದರ ಕಿ.ಮೀ ಪ್ರದೇಶದಲ್ಲಿ ಕೇವಲ 5,99,40 ಚದರ ಕಿ.ಮೀ ಪಶ್ಚಿಮ ಘಟ್ಟದ ಸಂರಕ್ಷಿತ ವಲಯವಾಗಿದೆ ಎಂದು ಹೇಳಿತು.
ಆದರೆ ಕೇಂದ್ರ ಸರ್ಕಾರದ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 5ರ ಅಡಿಯಲ್ಲಿ 59,940 ಚದರ ಕಿ.ಮೀ ಪ್ರದೇಶ ಪಶ್ಚಿಮ ಘಟ್ಟವಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಜತೆಗೆ ಗುಜರಾತ್, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಪಶ್ಚಿಮ ಘಟ್ಟಗಳನ್ನು ರಕ್ಷಿಸುವಲ್ಲಿ ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.
ಇದೀಗ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್ವಿ ಬೊಬ್ಡೆ ನೇತೃತ್ವದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ,ಕೇಂದ್ರ ಸರ್ಕಾರ ಮತ್ತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನೋಟಿಸ್ ನೀಡಿದೆ.