ನವದೆಹಲಿ: ಆಂಧ್ರಪ್ರದೇಶದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ರಾಜ್ಯ ಚುನಾವಣಾ ಆಯುಕ್ತ ರಮೇಶ್ ಕುಮಾರ್ ಪ್ರಕರಣದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಸಿಎಂ ಜಗನ್ ಅವರ ಸರ್ಕಾರ ಆಂಧ್ರ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಪ್ರಕರಣ ಸಂಬಂಧ ಎರಡು ವಾರಗಳೊಳಗೆ ಉತ್ತರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ರಮೇಶ್ ಕುಮಾರ್ ಅವರನ್ನು ಸುಗ್ರೀವಾಜ್ಞೆ ಮೂಲಕ ಎಸ್‌ಇಸಿ ಹುದ್ದೆಯಿಂದ ತೆರವು ಮಾಡಿತ್ತು. ಇದನ್ನು ಪ್ರಶ್ನಿಸಿ ರಮೇಶ್ ಕುಮಾರ್ ಆಂಧ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರದ ಸುಗ್ರೀವಾಜ್ಞೆಯ ಆದೇಶಕ್ಕೆ ತಡೆ ನೀಡಿದ್ದ ನ್ಯಾಯಾಲಯ, ರಮೇಶ್ ಕುಮಾರ್ ಅವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ಮುಂದುವರೆಸುವಂತೆ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಗಿತ್ತು.