ನವದೆಹಲಿ: ಇಬ್ಬರಿಗಿಂತ ಅಧಿಕ ಜೀವಂತ ಮಕ್ಕಳಿದ್ದವರಿಗೆ ಪಂಚಾಯತ್ ಮಟ್ಟದ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸಬೇಕು ಎಂದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಉತ್ತರಾಖಂಡ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯ ಪೀಠವು ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಅರ್ಜಿಯ ಬಗ್ಗೆ ನೋಟಿಸ್ ನೀಡಿದೆ. ಈ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಈ ಹಿಂದಿನ ಉತ್ತರಾಖಂಡ ಪಂಚಾಯತ್ ರಾಜ್ (ತಿದ್ದುಪಡಿ) 2019, ಕಾಯ್ದೆಯ ವಿಭಾಗಕ್ಕೆ ಸಂಬಂಧಿಸಿದ್ದ ಹೈಕೋರ್ಟ್ ಪೀಠದ ತೀರ್ಪನ್ನ ಈ ವೇಳೆ ಓದಲಾಯಿತು. 'ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳ ಅನರ್ಹತೆ ನಿಗದಿಪಡಿಸಿದೆ' ಎಂದು 2019ರ ಜುಲೈ 25ರ ಉತ್ತರಾಖಂಡ ಹೈಕೋರ್ಟ್ ತೀರ್ಪನ್ನು ಸುಪ್ರೀಂ ನ್ಯಾಯಪೀಠದ ಗಮನಕ್ಕೆ ತರಲಾಯಿತು.