ಭೋಪಾಲ್: ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಆಲಂಪುರ್ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯು ಹುಕುಮ್ ಸಿಂಗ್ ಎಂಬ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಒಂದೇ ಸಂಖ್ಯೆಯ ಎರಡು ಖಾತೆಗಳನ್ನು ತೆರೆದು ಪಜೀತಿ ಮಾಡಿದೆ.
ಬ್ಯಾಂಕ್ ಮಾಡಿದ ಈ ತಪ್ಪಿನಿಂದಾಗಿ ಒಬ್ಬ ಹುಕುಮ್ ಸಿಂಗ್ ಸಂತೋಷದಲ್ಲಿ ತೇಲಾಡುತ್ತಿದ್ದರೆ, ಇನ್ನೊಬ್ಬ ಹುಕುಮ್ ಸಿಂಗ್ ಕಂಗಾಲಾಗಿದ್ದಾನೆ. ನಿಯಮಿತವಾಗಿ ತಮ್ಮ ಖಾತೆಗೆ ಹಣ ಹರಿದು ಬರುತ್ತಿರುವುದನ್ನು ನೋಡಿದ ಒಬ್ಬ ಹುಕುಮ್ ಸಿಂಗ್, ಹಣವನ್ನ ಪಡೆದು ವಿತ್ ಡ್ರಾ ಮಾಡುತ್ತಾ ಬಂದಿದ್ದಾರೆ. 'ಮೋದಿ ಸರ್ಕಾರ ನನ್ನ ಖಾತೆಗೆ ಹಣ ಹಾಕುತ್ತಿದೆ', ಪ್ರಧಾನ ಮಂತ್ರಿಯ "ಅಚ್ಚೇ ದಿನ್" ಮಾತು ನಿಜವಾಗುತ್ತಿದೆ ಎಂದು ಭಾವಿಸಿದ್ದರಂತೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಬಿಐ ಆಲಂಪುರ್ ಶಾಖಾ ವ್ಯವಸ್ಥಾಪಕ ರಾಜೇಶ್ ಸೋಂಕರ್, ಕ್ಲೆರಿಕಲ್ ತಪ್ಪಿನಿಂದಾಗಿ ನಮ್ಮ ಶಾಖೆ ಹೀಗೆ ಹುಕುಮ್ ಸಿಂಗ್ ಹೆಸರಿನ ಇಬ್ಬರಿಗೆ ಒಂದೇ ಖಾತೆ ನೀಡಿದೆ. ರುರೈ ಗ್ರಾಮದ ನಿವಾಸಿ ಹುಕುಮ್ ಸಿಂಗ್ ಈ ಖಾತೆಗರ ಹಣವನ್ನು ಜಮಾ ಮಾಡುತ್ತಾ ಬಂದಿದ್ದಾರೆ, ಇನ್ನೊಬ್ಬ ರೌನಿ ಗ್ರಾಮದ ನಿವಾಸಿ ಹುಕುಮ್ ಸಿಂಗ್ ಕಳೆದೊಂದು ವರ್ಷದಿಂದ ವಿತ್ ಡ್ರಾ ಮಾಡುತ್ತಾ ಬಂದಿದ್ದಾರೆ. ರೌನಿ ಗ್ರಾಮದ ಹುಕುಮ್ ಸಿಂಗ್ ಅಕ್ಟೋಬರ್ 16 ರಂದು ತನ್ನ ಖಾತೆಯನ್ನ ಪರಿಶೀಲಿಸಿದ್ದು, ದೊಡ್ಡ ಮಟ್ಟದಲ್ಲಿ ಹಣ ವಿತ್ ಡ್ರಾ ಆಗಿರುವುದನ್ನು ಗಮನಿಸಿ, ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
2016 ರಲ್ಲಿ ನಾನು ಬ್ಯಾಂಕ್ ಖಾತೆ ತೆರೆದಿದ್ದು, ನಿಯಮಿತವಾಗಿ ಹಣ ಜಮಾ ಮಾಡುತ್ತಾ ಬಂದಿದ್ದೇನೆ. ಈ ಹಣದಿಂದ ನಾನು ಫ್ಲಾಟ್ ಅಥವಾ ಜಾಗ ಕೊಂಡುಕೊಳ್ಳಬೇಕೆಂದಿದ್ದೆ. ಆದರೆ ನನ್ನ ಖಾತೆಯಿಂದ ಯಾರೋ 89 ಸಾವಿರ ಹಣ ಪಡೆದಿದ್ದಾರೆ. ಆದರೆ ಹಲವಾರು ಬಾರಿ ಬ್ಯಾಂಕ್‌ಗೆ ಭೇಟಿ ನೀಡಿದರೂ ಇನ್ನೂ ಕೂಡ ತಮ್ಮ ಹಣವನ್ನು ಮರಳಿ ಪಡೆಯಬೇಕಾಗಿಲ್ಲ ಎಂದು ನೊಂದ ಹುಕುಮ್ ಸಿಂಗ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆದರೆ ಈ ಬಗ್ಗೆ ರೌನಿ ಗ್ರಾಮದ ಹುಕುಮ್ ಸಿಂಗ್ನನ್ನ ಕೇಳಿದರೆ 'ಮೋದಿಜಿ ನನಗೆ ಹಣ ಕಳುಹಿಸುತ್ತಿದ್ದಾರೆ ಎಂದು ನಾನು ವಿತ್ ಡ್ರಾ ಮಾಡುತ್ತಾ ಬಂದಿದ್ದೇನೆ' ಅಂತ ಹೇಳುತ್ತಾರೆ.