ಮೀರತ್ (ಉತ್ತರ ಪ್ರದೇಶ): ಗಡ್ಡ ಬೆಳೆಸಿದ್ದಕ್ಕೆ ಪೊಲೀಸ್ ಇಲಾಖೆಯಿಂದ ಸಬ್ ಇನ್ಸ್ಪೆಕ್ಟರ್ ಅಮಾನತಾದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ವಿಪಕ್ಷಗಳು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಈ ಬಗ್ಗೆ ಇಸ್ಲಾಮಿಕ್ ಧಾರ್ಮಿಕ ಮುಖಂಡರು ಪ್ರತಿಕ್ರಿಯೆ ನೀಡಿದ್ದು, ಗಡ್ಡ ಬೆಳೆಸುವುದು ಧಾರ್ಮಿಕ ಹಕ್ಕು. ಗಡ್ಡ ಬೆಳೆಸಿದ ವಿಚಾರಕ್ಕೆ ಸಬ್ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡುವುದು ಆತನ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಅನ್ನು ಅಮಾನತು ಮಾಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಧಾರ್ಮಿಕ ಮುಖಂಡರು ಆಗ್ರಹಿಸಿದ್ದಾರೆ. ಸಿಖ್ ಸಮುದಾಯದ ಜನರಿಗೆ ಪೇಟ ತೊಡುವ ಮತ್ತು ಗಡ್ಡ ಬಿಡುವ ಸ್ವಾತಂತ್ರ್ಯವಿದೆ. ಅದೇ ರೀತಿ ಇಸ್ಲಾಂ ಧರ್ಮದಲ್ಲಿಯೂ ಜನರು ತಮ್ಮ ಧರ್ಮದ ಪ್ರಕಾರ ಗಡ್ಡ ಇಟ್ಟುಕೊಳ್ಳುವ ಮೂಲ ಹಕ್ಕನ್ನು ಹೊಂದಿದ್ದಾರೆ ಎಂದು ಉಲೆಮಾ ಮೌಲಾನಾ ಲುತ್ಪುರ್ ರಹಮಾನ್ ಸಾದಿಕ್ ಕಸಾಮಿ ಹೇಳಿದ್ದಾರೆ.
ಇದರ ಜೊತೆಗೆ ಹಿಂದೂ ಮತ್ತು ಮುಸ್ಲಿಮರಲ್ಲಿ ದ್ವೇಷ ಹರಡುತ್ತಿರುವ ಇಂತಹ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸುವಂತೆ ನಾವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸುತ್ತೇವೆ ಎಂದು ರಹಮಾನ್ ಸಾದಿಕ್ ಕಸಾಮಿ ಸ್ಪಷ್ಟನೆ ನೀಡಿದ್ದಾರೆ.
ಇಂತೆಸರ್ ಅಲಿ ಎಂಬ ಸಬ್ ಇನ್ಸ್ಪೆಕ್ಟರ್ ಗಡ್ಡ ಬೆಳೆಸಿದ್ದ ಎಂಬ ಆರೋಪದಲ್ಲಿ ಆತನನ್ನು ಪೊಲೀಸ್ ವರಿಷ್ಠಾಧಿಕಾರಿಯಾದ ಬಾಘ್ಪತ್ ಅಮಾನತು ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಇಲಾಖೆ ಗಡ್ಡ ತೆಗೆಯುವಂತೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಇಂತೆಸಾರ್( इंतसार अली)ಅಲಿ ಗಡ್ಡ ತೆಗೆದಿರಲಿಲ್ಲ ಎಂದಿದೆ.
ಗಡ್ಡ ಬೆಳೆಸುವ ಇಚ್ಛೆ ಹೊಂದಿದ್ದಲ್ಲಿ ಅದಕ್ಕೆ ಇಲಾಖೆಯ ಅನುಮತಿ ಅತ್ಯಗತ್ಯ. ಅನುಮತಿ ಕೇಳದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಮತ್ತೊಂದು ಮೂಲದ ಪ್ರಕಾರ ಇಂತೆಸಾರ್ ಅಲಿ ಗಡ್ಡ ಬೆಳೆಸುವಂತೆ ಮನವಿ ಮಾಡಿ ಮೀರತ್ನ ಡಿಐಜಿ ಕಚೇರಿಗೆ ಪತ್ರ ಬರೆದಿದ್ದು, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ತಿಳಿದುಬಂದಿದೆ.