ನವದೆಹಲಿ: ಚಂದ್ರಯಾನ-2 ಯಶಸ್ವಿಯಾಗಿ ತನ್ನ ಗುರಿಯತ್ತ ಸಾಗುತ್ತಿರುವ ವೇಳೆಯಲ್ಲೇ ಇಸ್ರೋ ಮುಮದಿನ ಯೋಜನೆಗೆ ಸದ್ದಿಲ್ಲದೆ ಚಾಲನೆ ನೀಡಿದೆ.
ಚಂದ್ರಯಾನ-2 ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತ ಇಳಿಕೆಗೆ ಕಾರ್ಯಯೋಜನೆ ಹಾಕಿಕೊಂಡಿರುವ ಇಸ್ರೋ 2022ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಯೋಜನೆ ಸಿದ್ಧಪಡಿಸುತ್ತಿದೆ. ಈ ಯೋಜನೆಗೆ ಇದೀಗ ಫ್ರಾನ್ಸ್ ಹಾಗೂ ರಷ್ಯಾ ವಿವಿಧ ರೀತಿಯಲ್ಲಿ ಸಹಕರಿಸಲಿವೆ.
2022ರಲ್ಲಿ ಇಸ್ರೋ ಯೋಜಿತ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ 'ಗಗನಯಾನ' ಎನ್ನುವ ಹೆಸರನ್ನಿಟ್ಟಿದ್ದು, ಇದಕ್ಕಾಗಿ ನಾಲ್ವರು ಭಾರತೀಯರಿಗೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ(ರೊಸ್ಕೊಸ್ಮೊಸ್) ತರಬೇತಿ ನೀಡಲಿದೆ. ನಾಲ್ವರಲ್ಲಿ ಮೂವರನ್ನು ಅಂತಿಮ ಮಾಡಲಾಗುತ್ತದೆ. ಇದೇ ವೇಳೆ ಪ್ರಾನ್ಸ್ ವೈದ್ಯಕೀಯ ನೆರವನ್ನು ನೀಡಲಿದೆ.
ಚಂದ್ರನ ವಾತಾವರಣ ಹಾಗೂ ನೀರಿನಂಶ ಪತ್ತೆಯೇ ಇಸ್ರೋದ ಮೊದಲ ಆದ್ಯತೆ: ಸಿವನ್ ಘೋಷಣೆ
ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಯ ಮತ್ತೊಂದು ಅಂಗ ಗ್ಲಾವ್ಕೋಸ್ಮೋಸ್ ಸದ್ಯ 'ಗಗನಯಾನ' ಯೋಜನೆಯಲ್ಲಿ ಪಾಲುದಾರರಾಗಲು ಇಸ್ರೋ ಜೊತೆ ಒಪ್ಪಂದ ಮಾಡಿಕೊಂಡಿದೆ. ತರಬೇತಿ ಪ್ರಕ್ರಿಯೆ ಯೂರಿ ಗಗಾರಿನ್ ಕಾಸ್ಮೋನಾಟ್ ತರಭೇತಿ ಕೇಂದ್ರದಲ್ಲಿ ನಡೆಯಲಿದೆ.
ದಿನದ ಹಿಂದೆ ರಷ್ಯಾಕ್ಕೆ ಭೇಟಿ ನೀಡಿದ್ದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಈ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ. ದೋವಲ್ ರಷ್ಯಾ ಪ್ರವಾಸದ ವೇಳೆ, ರೋಸ್ಕೋಸ್ಮೊಸ್ ಪ್ರಧಾನ ನಿರ್ದೇಶಕ ಡಿಮಿಟ್ರಿ ರೊಗೊಜಿನ್ರನ್ನು ಭೇಟಿ ಮಾಡಿ ಯೋಜನೆ ಕುರಿತಂತೆ ಮಾತುಕತೆ ನಡೆಸಿದ್ದರು.
ಸುಮಾರು ಹತ್ತು ಸಾವಿರ ಕೋಟಿಯ 'ಗಗನಯಾನ' ಯೋಜನೆಯನ್ನು 2018ರ ಆಗಸ್ಟ್ 15ರಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಮೂವರು ಭಾರತೀಯರನ್ನು ಬಾಹ್ಯಾಕಾಶ ಕಳುಹಿಸುವ ಯೋಜನೆ ಇದಾಗಿದ್ದು, ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿರಲಿದ್ದಾರೆ. 'ಗಗನಯಾನ'ದ ಮೂಲಕ ಭಾರತವು ರಷ್ಯಾ, ಅಮೆರಿಕ ಹಾಗೂ ಚೀನಾ ನಂತರದಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ ನಡೆಸಿದ ನಾಲ್ಕನೇ ರಾಷ್ಟ್ರವಾಗಲಿದೆ.