ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ʼವ್ಯೋಮಮಿತ್ರʼ ಹೆಸರಿನ ಬಾಹ್ಯಾಕಾಶ ಸಂಚಾರಿ ಮಾನವರೂಪಿ ರೊಬೊಟ್ ರೂಪಿಸಿದ್ದು, ಅದು ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಬೆಂಗಳೂರಿನಲ್ಲಿ 22 ಜನವರಿ 2020 ರಂದು ಹಮ್ಮಿಕೊಂಡಿದ್ದ ಮಾನವಸಹಿತ ಬಾಹ್ಯಾಕಾಶ ಯಾನ ಮತ್ತು ಅನ್ವೇಷಣೆ ಹೆಸರಿನ ವಿಚಾರಗೋಷ್ಠಿಯಲ್ಲಿ ಈ ಅರೆ ಮಾನವರೂಪಿ ರೊಬೊಟ್ ಹಾಯ್! ನಾನು ಅರೆ ಮಾನವರೂಪಿ ರೋಬೊಟ್ ವ್ಯೋಮಮಿತ್ರʼ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿತು. ಮಾನವರೂಪಿ ರೋಬೊಟ್‌ಗಳ ಕ್ಷೇತ್ರದಲ್ಲಿ ವ್ಯೋಮಮಿತ್ರ ಒಂದು ಮಹತ್ವದ ಮೈಲುಗಲ್ಲು ಎಂದು ಪರಿಗಣಿಸಲಾಗುತ್ತಿದೆ.
ಮಾನವರಹಿತ ಬಾಹ್ಯಾಕಾಶಯಾನದ ಅಭಿಯಾನದ ಭಾಗವಾಗಿ ಈ ಮಾನವರೂಪಿ ರೊಬೊಟ್ ಅನ್ನು ಇಸ್ರೊ ಉಡ್ಡಯನ ಮಾಡುತ್ತಿದೆ. ಈ ರೋಬೊಟ್ ಥೇಟ್ ಮನುಷ್ಯರ ರೀತಿಯೇ ಬಾಹ್ಯಾಕಾಶದಲ್ಲಿ ಕೆಲಸ ಮಾಡಲಿದೆ. ಜೀವರಕ್ಷಕಗಳು ಮತ್ತು ಆಮ್ಲಜನಕದ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಬಾಹ್ಯಾಕಾಶ ಯಾತ್ರಿಗಳಿಗೆ ಇದು ಮಾಹಿತಿ ನೀಡಲಿದೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 300 ಪೌಂಡ್ ಭಾರದ ಮಾನವರೂಪಿ ರೋಬೊಟ್ ಅನ್ನು ಉಡಾವಣೆ ಮಾಡಲು ಸಿದ್ಧವಾಗುತ್ತಿದ್ದು, ಮಂಗಳನ ಅಂಗಳದಲ್ಲಿ ಸಂಶೋಧನೆ ನಡೆಸುವ ಉದ್ದೇಶವನ್ನು ಹೊಂದಿದೆ. ಸುತ್ತಲಿನ ಪರಿಸರವನ್ನು ನಿರಂತರವಾಗಿ ಗಮನಿಸಲಿರುವ ಹಲವಾರು ಪಾರ್ಶ್ವ ಕ್ಯಾಮೆರಾಗಳು, 3-ಡಿ ಸ್ಟೀರಿಯೊಗಳು ಮತ್ತು ದೃಶ್ಯಗಳನ್ನು ಸೆರೆ ಹಿಡಿಯುವ ಕ್ಯಾಮೆರಾಗಳನ್ನು ಅದು ಹೊಂದಿದೆ. ಜಾಗತಿಕವಾಗಿ ವಿಜ್ಞಾನಿಗಳು ಮಾನವರೂಪಿ ರೊಬೊಟ್‌ಗಳ ಉತ್ಪಾದನೆಯಲ್ಲಿ ದ್ವಿಗುಣ ಉತ್ಸಾಹದಿಂದ ತೊಡಗಿದ್ದು, ಜಗತ್ತಿನಾದ್ಯಂತ ಇಂತಹ ಮಾನವರೂಪಿ ರೊಬೊಟ್‌ಗಳ ಬಳಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ.
ಹೊಸ ಜಗತ್ತಿನತ್ತ ಹೆಜ್ಜೆ...
ಮನುಷ್ಯನ ನಡವಳಿಕೆಗಳನ್ನು ಅನುಕರಿಸುವ ಮಾನವರೂಪಿ ರೊಬೊಟ್‌ಗಳನ್ನು ಥೇಟ್ ಸಾಧಾರಣ ಮನುಷ್ಯನ ರೀತಿ ವಿನ್ಯಾಸಗೊಳಿಸಲಾಗಿದ್ದು, ಮನುಷ್ಯರಂತೆ ಅವು ಸಂವಹನ ನಡೆಸಬಲ್ಲವು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಬಲ್ಲವು. ಈ ಪೈಕಿ ಕೆಲವು ರೊಬೊಟ್‌ಗಳು ಹಿಂದೆ ನಡೆದ ಸಂಭಾಷಣೆಗಳನ್ನು ನೆನಪಿಸಿಕೊಳ್ಳಬಲ್ಲವಾಗಿದ್ದು, ಮನುಷ್ಯರ ರೀತಿ ತಾವೂ ನೆನಪಿಟ್ಟುಕೊಳ್ಳಬಲ್ಲವು ಎಂಬುದನ್ನು ಅವು ಹೇಳುವಂತಿವೆ. ಭಾವನೆಗಳನ್ನು ವ್ಯಕ್ತಪಡಿಸುವಂತಹ ಮಾನವರೂಪಿ ರೊಬೊಟ್‌ಗಳನ್ನು ನಿರ್ಮಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ.
ಹಾಂಗ್‌ಕಾಂಗ್ ಕಂಪನಿಯೊಂದು ʼಸೋಫಿಯಾʼ ಹೆಸರಿನ ಮಾನವರೂಪಿ ರೊಬೊಟನ್ನು ನಿರ್ಮಿಸಿದ್ದು, ಅದು 50 ರೀತಿಯ ವಿವಿಧ ಭಾವನೆಗಳನ್ನು ವ್ಯಕ್ತಪಡಿಸಬಲ್ಲದು. ಅಷ್ಟೇ ಅಲ್ಲ, ಮುಖಚಹರೆಯನ್ನು ಹಾಗೂ ದೃಶ್ಯಗಳನ್ನು ಸಹ ಅದು ಗುರುತಿಸಬಲ್ಲದು. ಮಾನವನ ಅಂಗ ಸನ್ನೆಗಳನ್ನು ಅನುಕರಿಸಬಲ್ಲದು. ಇತರ ಯಾವುದೇ ಮನುಷ್ಯನಂತೆ, ಮನುಷ್ಯರ ಜೊತೆಗೆ ಸ್ವಲ್ಪ ಮಟ್ಟಿಗೆ ಸಂವಹನ ನಡೆಸುವುದೂ ಸೋಫಿಯಾಳಿಗೆ ಸಾಧ್ಯವಾಗಿದೆ.
ನಾಲ್ಕು ವರ್ಷಗಳ ಹಿಂದೆ ಚೀನಾ ದೇಶ ಮೊದಲ ಮಾನವರೂಪಿ ರೊಬೊಟ್ ಅನ್ನು ನಿರ್ಮಿಸಿದ್ದು, ಅದು ಸುಂದರ ಮಹಿಳೆಯನ್ನು ಹೋಲುವಂತಿತ್ತು. ಅದಕ್ಕೆ ʼಝಿಯಾʼ ಎಂದು ಹೆಸರಿಡಲಾಗಿತ್ತು. ಹವಾಮಾನ ಹೇಗಿದೆ ಎಂಬುದನ್ನೂ ಈ ರೊಬೊಟ್ ಹೇಳಬಲ್ಲದು. ಕಣ್ಣಿನ ಚಲನೆ ಮತ್ತು ತುಟಿಯ ಏರಿಳಿತಕ್ಕೆ ಸಂಬಂಧಿಸಿದಂತೆ ಸಾಕಷ್ಟು ಎಚ್ಚರಿಕೆಗಳನ್ನು ತೆಗೆದುಕೊಂಡು ಈ ರೊಬೊಟ್ ಅನ್ನು ವಿನ್ಯಾಸ ಮಾಡಲಾಗಿತ್ತು.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿಯ ಸಂಶೋಧನೆಗಳು ವೇಗ ಪಡೆದುಕೊಳ್ಳುತ್ತಿವೆ. ಇದರ ಪರಿಣಾಮವಾಗಿ, ರೊಬೊಟ್‌ಗಳ ವಿನ್ಯಾಸದಲ್ಲಿ ಗುಣಾತ್ಮಕ ಬದಲಾವಣೆಗಳು ಬರತೊಡಗಿವೆ. ಚೀನಾದಲ್ಲಂತೂ ರೊಬೊಟ್‌ಗಳ ಬಳಕೆ ವ್ಯಾಪಕವಾಗಿದ್ದು, ರೆಸ್ಟೊರಾಂಟ್‌ಗಳು, ನರ್ಸಿಂಗ್ ಹೋಮ್‌ಗಳು, ಆಸ್ಪತ್ರೆಗಳು ಹಾಗೂ ಮನೆಗಳಲ್ಲಿಯೂ ಅವುಗಳನ್ನು ಕಾಣಬಹುದು. ಅಮೆರಿಕ, ಕೆನಡಾ, ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಸಿಂಗಾಪುರ ದೇಶಗಳೆಲ್ಲವೂ ರೊಬೊಟ್‌ಗಳ ನಿರ್ಮಾಣದಲ್ಲಿ ಸಕ್ರಿಯವಾಗಿವೆ. ಕೆಲ ದೇಶಗಳು ʼಕೃತಕ ಬುದ್ಧಿಮತ್ತೆʼಗಾಗಿ ವಿಶೇಷ ಬಜೆಟ್ ಕೂಡಾ ಹೊಂದಿವೆ.
ಸುದ್ದಿಯನ್ನು ಓದಬಲ್ಲಂತಹ ಮೊದಲ ಆಂಡ್ರಾಯ್ಡ್ ಆಧರಿತ ರೊಬೊಟ್ ಅನ್ನು ಜಪಾನಿ ವಿಜ್ಞಾನಿಗಳು 2014ರಲ್ಲಿ ವಿನ್ಯಾಸಗೊಳಿಸಿದ್ದರು. ಖ್ಯಾತ ಲೇಖಕ ಹಾಗೂ ಉದ್ಯಮಿ ಮಾರ್ಟಿನ್ ರೊಥ್‌ಬ್ಲಾಟ್ ಅವರ ಪತ್ನಿಯನ್ನು ಹೋಲುವ ರೀತಿ ಈ ರೊಬೊಟ್ ಅನ್ನು ನಿರ್ಮಿಸಲಾಗಿದ್ದು, ಅವರ ನಿರ್ದೇಶನದ ಮೇರೆಗೆ, ಅವರು ಅಪೇಕ್ಷಿಸಿದ್ದ ʼಬೀನಾ45ʼ ಎಂದು ಹೆಸರಿಡಲಾಗಿದೆ. ನ್ಯಾಶನಲ್ ಜಿಯಾಗ್ರಫಿಕ್ ಚಾನೆಲ್ ಸಹಿತ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಈ ರೊಬೊಟ್ ಕಾಣಿಸಿಕೊಂಡಿದೆ.
ಅಧ್ಯಯನವೊಂದರ ಪ್ರಕಾರ, ಕೆಲಸಗಾರರು ನಿರ್ವಹಿಸುವ ಅರ್ಧದಷ್ಟು ಕೆಲಸವು 2025 ರ ವೇಳೆಗೆ ರೊಬೊಟ್‌ಗಳ ಪಾಲಾಗಲಿದೆ. ಸಾಮರ್ಥ್ಯದಲ್ಲಿ ಹೆಚ್ಚಳ ಮತ್ತು ಉತ್ಪಾದನಾ ವೆಚ್ಚ ಕಡಿಮೆಯಾಗುವುದೇ ಇದಕ್ಕೆ ಕಾರಣ. ಕಂಪ್ಯೂಟರ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ವಿದ್ಯುತ್ ಸಾಧನಗಳು, ಗೃಹೋಪಯೋಗಿ ಸಾಧನಕಗಳು ಮತ್ತು ಸಾರಿಗೆ ಸಾಧನಗಳಲ್ಲಿ ರೊಬೊಟ್‌ಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ. ಇತರೆಲ್ಲ ಕ್ಷೇತ್ರಗಳಿಗಿಂತ ಸೇವಾ ಕ್ಷೇತ್ರವು ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಕ್ಕೆ ಒಳಗಾಗಲಿದೆ.
2016 ರಲ್ಲಿ 2.96 ಕೋಟಿ ಘಟಕಗಳಷ್ಟಿದ್ದ ಮಾನವ ರೊಬೊಟ್‌ಗಳ ಬಳಕೆ ಪ್ರಮಾಣವು 2026 ರ ವೇಳೆಗೆ (ಬರ್ಗ್ ಇನ್‌ಸೈಟ್ ವರದಿ) 2643 ಕೋಟಿ ಘಟಕಗಳಿಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. 2018 ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ರೊಬೊಟ್ ಉದ್ಯಮದ ಪ್ರಮಾಣ $3.80.100 ಕೋಟಿಯಷ್ಟಿದ್ದು, 2023ರ ವೇಳೆಗೆ ಇದು $6.40.000 ಕೋಟಿಗೆ ತಲುಪಬಹುದು ಎಂದು ಬಿಸಿಸಿ ಸಂಶೋಧನಾ ಸಂಸ್ಥೆ ಅಂದಾಜಿಸಿದೆ.
ರೊಬೊಟ್‌ಗಳ ಬಳಕೆ ಜರ್ಮನಿ ಕೈಗಾರಿಕೆಗಳಲ್ಲಿ ಅಧಿಕ ಪ್ರಮಾಣದಲ್ಲಿದ್ದು, 10.000 ಉದ್ಯೋಗಿಗಳ ಪೈಕಿ ಸರಾಸರಿ 309 ರೊಬೊಟ್‌ಗಳನ್ನು ಅಲ್ಲಿ ಬಳಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿನ ಇತರೆಡೆ ಹೋಲಿಸಿದರೆ ಈ ಪ್ರಮಾಣ ನಿಜಕ್ಕೂ ಅಧಿಕ. ಮನುಷ್ಯನ ಪ್ರವೇಶ ಕಷ್ಟವಾಗಿರುವಂತಹ ಪ್ರದೇಶಗಳಲ್ಲಿ ರೊಬೊಟ್‌ಗಳನ್ನು ಬಳಸಲಾಗುತ್ತದೆ. ಇಟಲಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ʼವಾಕ್ ಮ್ಯಾನ್ʼ ರೊಬೊಟ್ ಅನ್ನು ನಿರ್ಮಿಸಿತ್ತು. 2015 ರಲ್ಲಿ ಮೊದಲ ಸಲ ವಿನ್ಯಾಸಗೊಳಿಸಲಾಗಿದ್ದ ಈ ರೊಬೊಟ್, ಅಲ್ಲಿಂದೀಚೆಗೆ ಹೆಚ್ಚುವರಿ ತಾಂತ್ರಿಕ ಲಕ್ಷಣಗಳೊಂದಿಗೆ ಮೇಲ್ದರ್ಜೆಗೆ ಏರುತ್ತಲೇ ಬಂದಿದೆ.
ಆರು ಅಡಿ ಎತ್ತರ ಹಾಗೂ 102 ಕೆಜಿ ತೂಗುವ ರೀತಿ ಅದನ್ನು ವಿನ್ಯಾಸಗೊಳಿಸಲಾಗಿತ್ತು. ಒಂದು ಕಿಲೊವ್ಯಾಟ್ ಬ್ಯಾಟರಿ ಮೂಲಕ ಎರಡು ಗಂಟೆಗಳ ಕಾಲ ಅದು ಕೆಲಸ ಮಾಡಬಲ್ಲುದಾಗಿತ್ತು. ಮನೆಯೊಳಗೆ ಅಡುಗೆ ಅನಿಲ ಸೋರಿಕೆಯಂತಹ ಆಕಸ್ಮಿಕಗಳ ಸಂದರ್ಭದಲ್ಲಿ, ಅದು ಕೊಠಡಿಯ ಬಾಗಿಲುಗಳನ್ನು ತಂತಾನೆ ತೆರೆದು ಮನೆಯ ಒಳಪ್ರದೇಶಗಳಿಗೆ ಹೋಗಬಲ್ಲುದು. ಸೋರಿಕೆಯ ಮೂಲವನ್ನು ಪತ್ತೆ ಹಚ್ಚಬಲ್ಲುದಲ್ಲದೇ ಸಂಬಂಧಿಸಿದ ಕವಾಟಗಳನ್ನು ಅದು ಬಂದ್ ಮಾಡಬಲ್ಲುದು. ಇಂತಹ ಅಪಘಾತಗಳ ನಂತರ ಹಾಳಾದ ಪ್ರದೇಶವನ್ನು ಸಹ ಅದು ತೆರವುಗೊಳಿಸಬಲ್ಲುದು.
ಇಂಜಿನಿಯರಿಂಗ್ ಚಟುವಟಿಕೆಗಳಲ್ಲಿಯೂ ರೊಬೊಟ್‌ಗಳ ಸೇವೆಯನ್ನು ಬಳಸಬಹುದಾಗಿದೆ. ಜಾಯಿಂಟ್ ರೊಬೊಟಿಕ್ಸ್ ಲ್ಯಾಬೊರೇಟರಿ ಮತ್ತು ಏರ್‌ಬಸ್ ಗ್ರೂಪ್ ಸಂಸ್ಥೆಗಳು ನಾಲ್ಕು ವರ್ಷಗಳ ಕಾಲ ಜಂಟಿಯಾಗಿ ಸಂಶೋಧನೆಗಳನ್ನು ಕೈಗೊಂಡಿವೆ. ವಿಮಾನಗಳ ನಿರ್ಮಾಣ ಮತ್ತು ಮನುಷ್ಯನಿಗೆ ಅಪಾಯ ಒಡ್ಡಬಲ್ಲ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಮಾನವ ಕೆಲಸಗಾರರ ಬದಲು ರೊಬೊಟ್‌ಗಳನ್ನು ಬಳಸಲಾಗುತ್ತಿದೆ.
ರೊಬೊಟ್‌ಗಳು ಎಲ್ಲೆಲ್ಲೂ...
ಎಚ್‌ಆರ್‌ಪಿ2 ಮತ್ತು ಎಚ್‌ಆರ್‌ಪಿ4 ಮಾದರಿಯ ರೊಬೊಟ್‌ಗಳನ್ನು ಜಾಯಿಂಟ್ ರೊಬೊಟಿಕ್ಸ್ ಲ್ಯಾಬೊರೇಟರಿ ನಿರ್ಮಿಸಿದ್ದು, ಅವು ಏಣಿಯನ್ನು ಏರಬಲ್ಲವು ಮತ್ತು ಎತ್ತರದ ಪ್ರದೇಶಗಳನ್ನು ತಲುಪಬಲ್ಲವು. ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾನವನ ಸ್ನಾಯುಗಳನ್ನು ಹೋಲುವಂತಹ ಅಸ್ಥಿಬಂಧಗಳ ಜೋಡಣೆಗಳನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ತಮ್ಮ ಅಂಗಾಂಗಳನ್ನು ಸರಾಗವಾಗಿ ಚಲಿಸಲು ರೊಬೊಟ್‌ಗಳಿಗೆ ಸಾಧ್ಯವಾಗಿದೆ. ಸಿಂಥೆಟಿಕ್ ಸ್ನಾಯುಗಳನ್ನು ಅಳವಡಿಸಿರುವುದರಿಂದ ತಮ್ಮ ತೂಕಕ್ಕಿಂತ ಸಾವಿರಪಟ್ಟು ಹೆಚ್ಚು ತೂಕವನ್ನು ಹೊತ್ತೊಯ್ಯುವುದು, ಚಲಿಸುವುದು ಮತ್ತು ತಮ್ಮ ದೇಹವನ್ನು ಸರಾಗವಾಗಿ ಮಣಿಸುವುದು ಅವುಗಳಿಗೆ ಸಾಧ್ಯವಾಗಿದೆ. ವಯಸ್ಸಾದವರು, ಅಂಬೆಗಾಲಿಡುವ ಮಕ್ಕಳು ಮತ್ತು ನಿತ್ಯದ ಕೆಲಸಗಳಲ್ಲಿ ನೆರವಿನ ಅವಶ್ಯಕತೆ ಇರುವವರಿಗೆ ರೊಬೊಟ್‌ಗಳು ನೆರವಾಗಿವೆ. ಕಲಿಕಾ ಅಸಮರ್ಥತೆ ಹೊಂದಿರುವ ಮಕ್ಕಳು ಸ್ಪಷ್ಟವಾಗಿ ಮಾತನಾಡಲು ನೆರವಾಗುವ ಮೂಲಕ ರೊಬೊಟ್‌ಗಳು ಅವರಿಗೆ ಸಹಾಯ ಮಾಡಬಲ್ಲವು.
ವೈದ್ಯಕೀಯ ಕ್ಷೇತ್ರದಲ್ಲಿಯೂ ಅವು ಪೋಷಕ ಪಾತ್ರವನ್ನು ನಿರ್ವಹಿಸುತ್ತವೆ. ಭದ್ರತಾ ಕ್ಷೇತ್ರದಲ್ಲಿ ಸಹ ರೊಬೊಟ್‌ಗಳ ಪಾತ್ರ ಗಣನೀಯ ಮಹತ್ವ ಪಡೆದಿದೆ. ಕೃತಕ ಬುದ್ಧಿಮತ್ತೆಯಿಂದಾಗಿ ಅಪರಾಧ ನಿಯಂತ್ರಣ ಮತ್ತು ಪತ್ತೆ ಸಾಧ್ಯವಾಗಿದೆ. ಸಂಶಯಾಸ್ಪದ ವ್ಯಕ್ತಿಗಳ ಚಲನವಲನ ಗ್ರಹಿಸುವುದು ಸಾಧ್ಯವಾಗಿದೆ. ಕೃಷಿ ಮತ್ತು ಆಹಾರ ತಯಾರಿಕೆಯಲ್ಲಿಯೂ ಅವುಗಳನ್ನು ಬಳಸಲಾಗುತ್ತಿದೆ.
ಸಾಕುಪ್ರಾಣಿಗಳಾದ ನಾಯಿಗಳು ಮತ್ತು ಬೆಕ್ಕುಗಳಂತೆ ಮಾನವರೂಪಿ ರೊಬೊಟ್‌ಗಳು ಕುಟುಂಬದ ಭಾಗವಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಮನುಷ್ಯ ಜೀವನದಲ್ಲಿ ರೊಬೊಟ್‌ಗಳು ಸುಗಮ ಆಯ್ಕೆಯಾಗುವುದು ಸಾಧ್ಯವಾಗದು ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಏಕೆಂದರೆ, ರೊಬೊಟ್‌ಗಳನ್ನು ಸಾಮಾನ್ಯವಾಗಿ ಮುಂಚಿತವಾಗಿ ಪ್ರೊಗ್ರಾಂ ಮಾಡಲಾಗಿರುತ್ತದೆ. ತಮಗೆ ವಹಿಸಿದ ಜವಾಬ್ದಾರಿಗಳನ್ನಷ್ಟೇ ಅವು ನಿರ್ವಹಿಸಬಲ್ಲವು.
ಆದ್ರೆ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳುವ ಶಕ್ತಿ ಅವುಗಳಿಗೆ ಇರುವುದಿಲ್ಲ. ಸ್ವಯಂ ಪರಿಪೂರ್ಣತೆಯ ಕೊರತೆ, ತಮ್ಮಷ್ಟಕ್ಕೆ ತಾವೇ ಶಕ್ತಿಯನ್ನು ಉತ್ಪಾದಿಸಿಕೊಳ್ಳಲಾಗದ ಕೊರತೆ ಮತ್ತು ಬ್ಯಾಟರಿ ಮೇಲಿನ ಅವಲಂಬನೆಯಿಂದಾಗಿ ಸಹ ಅವುಗಳ ಕಾರ್ಯಕ್ಷಮತೆ ಮಿತಿಗೆ ಒಳಪಟ್ಟಿದೆ. ಅಭಿವೃದ್ಧಿ ಕ್ಷೇತ್ರದಲ್ಲಿ ಈ ಮಾನವರೂಪಿ ರೊಬೊಟ್‌ಗಳನ್ನು ಬಳಸುವ ಪ್ರಯತ್ನಗಳು ನಡೆದಿದ್ದು, ಯಾವುದೇ ದೇಶದ ಆರ್ಥಿಕ ಪ್ರಗತಿಯಲ್ಲಿ ಅವು ಪರಿಣಾಮಕಾರಿ ಸಾಧನಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ!
- ಪಾರ್ಥಸಾರಥಿ ಚಿರುವೋಲು