ಕೊಯಮತ್ತೂರು(ತಮಿಳುನಾಡು): ಕೊರೊನಾ ವಿರುದ್ಧ ಹೋರಾಡಲು ಸರ್ಕಾರವೂ ಸೇರಿದಂತೆ ಹಲವಾರು ಸಂಘ - ಸಂಸ್ಥೆಗಳು ಹೋರಾಡುತ್ತಿವೆ. ಈಗ ಕೊಯಮತ್ತೂರು ಮೂಲದ ಯುವಕರು ಕೊರೊನಾ ವಿರುದ್ಧ ಹೋರಾಡಲು ಒಂದು ರೋಬೋಟ್ ಅನ್ನು ಸಿದ್ಧಪಡಿಸಿದ್ದಾರೆ.
ಇವರು ಸಿದ್ಧಪಡಿಸಿರುವ ರೋಬೋಟ್ ಅತಿನೇರಳೆ ಕಿರಣಗಳನ್ನು ಬಳಸಿಕೊಂಡು ಕೊರೊನಾ ವೈರಸ್ಗಳನ್ನು ನಾಶಪಡಿಸುತ್ತದೆ ಎಂದು ಹೇಳಲಾಗುತ್ತಿದೆ. ಪಿಎಸ್ಜಿ ತಂತ್ರಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅರವಿಂದ್ ಹಾಗೂ ಮುತ್ತು ವೆಂಕಲಿಯಪ್ಪನ್ ಎಂಬುವವರು ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ರೋಬೋ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸಹಕಾರ ನೀಡಲಿದೆ. ಜೊತೆಗೆ ಮನೆಗಳಲ್ಲಿ ಹಾಗೂ ವಾಹನಗಳಲ್ಲೂ ಕೂಡಾ ಬಳಸಬಹುದಾಗಿದೆ. ಈ ಇಬ್ಬರೂ ಯುವಕರು ಇದಕ್ಕೂ ಮೊದಲು ಊಟ ಬಡಿಸುವ, ಖಾಸಗಿ ಕಂಪನಿಗಳನ್ನು ಕಾಯುವ ರೋಬೋಗಳನ್ನು ತಯಾರಿಸಿದ್ದರು. ಈ ರೋಬೋಗಳು ದೇಶದ ವಿವಿಧೆಡೆ ಕಾರ್ಯನಿರ್ವಹಿಸುತ್ತಿವೆ. ಸಿಂಗಾಪುರ ಹಾಗೂ ಬೇರೆ ಬೇರೆ ರಾಷ್ಟ್ರಗಳಿಗೂ ಈ ರೋಬೋವನ್ನು ರಫ್ತು ಮಾಡಲಾಗಿದೆ.
ಭಾರತದಂತಹ ರಾಷ್ಟ್ರಗಳಲ್ಲಿ ಇಂತಹ ರೋಬೋಗಳು ಉಪಯೋಗಕ್ಕೆ ಬರಲಿವೆ. ಒಂದು ರೋಬೋ ಬೆಲೆ 20 ಲಕ್ಷ ರೂಪಾಯಿ ಬೆಲೆ ಬಾಳುತ್ತಿದ್ದು, ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿದರೆ 2 ರಿಂದ 5 ಲಕ್ಷ ರೂಪಾಯಿಗೆ ದಕ್ಕುವಂತೆ ಮಾಡಬಹುದಾಗಿದೆ. ಸದ್ಯಕ್ಕೆ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲು ಸುಮಾರು ನಾಲ್ಕೈದು ತಿಂಗಳ ಅವಧಿ ಬೇಕಾಗಬಹುದು ಎನ್ನಲಾಗುತ್ತಿದೆ.