ನವದೆಹಲಿ: ರಾಧಾ ಕೃಷ್ಣ ಮಾಥುರ್ ಅವರು ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿದ ನಂತರ ಅಸ್ತಿತ್ವಕ್ಕೆ ಬಂದ ಲಡಾಖ್ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಕೆಲವು ದಿನಗಳ ಹಿಂದೆಯಷ್ಟು ನೂತನ ಕೇಂದ್ರಾಡಳಿತ ಪ್ರದೇಶಗಳಾಗಿ ರಚನೆಯಾಗಿದ್ದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಗಳು ಇಂದಿನಿಂದ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶಗಳಾಗಲಿವೆ. ಈ ಹಿನ್ನೆಲೆಯಲ್ಲಿ ಹೊಸ ಲೆಫ್ಟಿನೆಂಟ್ ಗವರ್ನರ್ಗಳ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಐಎಎಸ್ ಅಧಿಕಾರಿ ಗಿರೀಶ್ ಚಂದ್ರ ಮುರ್ಮು ಹಾಗೂ ಲಡಾಖ್ಗೆ ರಾಧಾ ಕೃಷ್ಣ ಮಾಥುರ್ ಅವರನ್ನು ನೂತನ ಲೆಫ್ಟಿನೆಂಟ್ ಗವರ್ನರ್ಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು.
1977 ರ ಬ್ಯಾಚ್ ಅಧಿಕಾರಿಯಾಗಿದ್ದ ಮಾಥುರ್, ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಮಾಜಿ ಮುಖ್ಯ ಮಾಹಿತಿ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ ಅಪಾರ ಅನುಭವ ಅವರಿಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರದ ಮೋದಿ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿತ್ತು.