ಮುಂಬೈ: ಭಾರತದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಾಗೂ ಪ್ರೋಟೀನ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ಭಾರತದ ಮೊದಲ ಪ್ರೋಟೀನ್ ದಿನವನ್ನು ಘೋಷಿಸಲಾಗಿದೆ. ಈ ಮೂಲಕ ಭಾರತೀಯ ನಾಗರಿಕರಿಗೆ ಪ್ರೋಟೀನ್ ಪಡೆಯುವುದು ಹೇಗೆ..? ಪ್ರೋಟೀನ್ ದೇಹಕ್ಕೆ ಎಷ್ಟು ಉಪಯೋಗ..? ಯಾವ ಯಾವ ಮೂಲಗಳಿಂದ ಪ್ರೋಟೀನ್ ದೊರಕುತ್ತದೆ ಎಂಬುದನ್ನು ಸವಿಸ್ತಾರವಾಗಿ ಜನರಿಗೆ ಅರಿವು ಮೂಡಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಇದರಲ್ಲಿ ಸಸ್ಯ ಮತ್ತು ಪ್ರಾಣಿ ಜನ್ಯ ಪ್ರೋಟೀನ್ ಬಗ್ಗೆಯೂ ಕೆಲವು ಮಹತ್ವವಾದ ವಿಷಯಗಳನ್ನು ಒದಗಿಸಿಕೊಡಲಾಗುತ್ತದೆ.
ರೈಟ್ ಟು ಪ್ರೋಟೀನ್ ಎಂಬ ಅಭಿಯಾನ ಈ ದಿನವನ್ನು ಘೋಷಿಸಿದ್ದು, ಜಾಗತಿಕವಾಗಿ ಈಗಾಗಲೇ ಸಾಕಷ್ಟು ರಾಷ್ಟ್ರಗಳು ಪ್ರೋಟೀನ್ ದಿನವನ್ನು ಈ ಮೊದಲಿನಿಂದಲೂ ಆಚರಿಸುತ್ತಿವೆ. ಈ ವರ್ಷದಿಂದ ಭಾರತವೂ ಕೂಡಾ ಪ್ರೋಟೀನ್ ದಿನವನ್ನು ಅಳವಡಿಸಿಕೊಳ್ಳುತ್ತಿದೆ. ಅಪೌಷ್ಟಿಕತೆ ನಿವಾರಣೆಗಾಗಿ ಹಾಗೂ ದೀರ್ಘಕಾಲದ ಆರೋಗ್ಯ ಸುಧಾರಣೆಗಾಗಿ ಪ್ರೋಟೀನ್ ಅನಿವಾರ್ಯವಿದ್ದು ಇದಕ್ಕಾಗಿ ಪ್ರೋಟೀನ್ ದಿನ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಪ್ರೋಟೀನ್ ಮೆ ಕ್ಯಾ ಹೇ..? ( ಪ್ರೋಟೀನ್ನಲ್ಲಿ ಏನಿದೆ..?) ಎಂಬುದು 2020ನೇ ವರ್ಷದ ಪ್ರೋಟೀನ್ ದಿನದ ಘೋಷವಾಕ್ಯ. ಪ್ರೋಟೀನ್ ಅನಿವಾರ್ಯತೆ ಬಗ್ಗೆ ಜನರಿಗೆ ಮನವರಿಕೆ ಮಾಡಲು ಈ ಘೋಷವಾಕ್ಯ ರೂಪಿಸಲಾಗಿದೆ.
ಭಾರತದ ಮೊದಲ ಪ್ರೋಟೀನ್ ದಿನದ ಬಗ್ಗೆ ಮಾತನಾಡಿರುವ ನ್ಯಾಷನಲ್ ಡಯಟಿಂಗ್ ಅಸೋಸಿಯೇಷನ್ ಅಧ್ಯಕ್ಷೆ ಡಾ.ಜಗಮೀತ್ ಮದನ್, ''ಪೌಷ್ಟಿಕಾಂಶಗಳ ವಿಚಾರದಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಭಾರತೀಯ ಪ್ರೋಟೀನ್ ದಿನವನ್ನು ಆಚರಿಸುವ ಮೂಲಕ ಮೊದಲ ಹೆಜ್ಜೆ ಇಡಲಾಗಿದೆ. ಈ ದಿನ ಆರೋಗ್ಯವಂತ ರಾಷ್ಟ್ರಕ್ಕೆ ಮೊದಲ ಹೆಜ್ಜೆಯಾಗಲಿದೆ'' ಎಂದಿದ್ದಾರೆ. ಈ ದಿನದ ಮೂಲ ಉದ್ದೇಶ ಪ್ರೋಟೀನ್ ಬಗ್ಗೆ ಇರುವ ಜ್ಞಾನವನ್ನು ಪಸರಿಸಿ ಭಾರತೀಯ ಪ್ರಜೆಗಳು ನಿತ್ಯ ತಾವು ತಿನ್ನುವ ಆಹಾರದಲ್ಲಿ ಅವಶ್ಯವಿರುವಷ್ಟು ಪ್ರೋಟೀನ್ ಅನ್ನು ಸೇವಿಸುವಂತೆ ಮಾಡುವುದಾಗಿದೆ. ಇದು ಗ್ರಾಮೀಣ ಹಾಗೂ ನಗರ ಭಾಗದ ಜನತೆಯನ್ನು ಒಳಗೊಂಡಿದ್ದು ಎಲ್ಲರಿಗೂ ಪ್ರೋಟೀನ್ ಮಹತ್ವವನ್ನು ತಿಳಿಸಿಕೊಡುತ್ತದೆ.