ನವದೆಹಲಿ: ಪ್ರತಿಯೊಬ್ಬ ಮನುಷ್ಯನೂ ಮಾನಸಿಕ ಶಾಂತಿ, ನೆಮ್ಮದಿಯ ಹಕ್ಕುದಾರನಾಗಿದ್ದಾನೆ ಮತ್ತು ವಿವಾಹವೆಂಬ ಸಂಸ್ಕಾರದಲ್ಲಿ ಪತಿ, ಪತ್ನಿ ಇಬ್ಬರಿಗೂ ಸಮಾನ ಹಕ್ಕು, ಅಧಿಕಾರಗಳಿವೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತ್ನಿಯ ಮೇಲೆ ದೌರ್ಜನ್ಯ ನಡೆಸಿದ ಕಾರಣಕ್ಕಾಗಿ ವಿವಾಹ ಅಸಿಂಧುಗೊಳಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಪತಿ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಅರ್ಜಿದಾರರ ವಾದ ತಳ್ಳಿಹಾಕಿದ ಕೋರ್ಟ್ ವಿವಾಹ ಅಸಿಂಧುಗೊಳಿಸಿದ ತೀರ್ಪನ್ನು ಎತ್ತಿ ಹಿಡಿಯಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಹಾಗೂ ಆಶಾ ಮೆನನ್ ನೇತೃತ್ವದ ಪೀಠ, ಮಗಳ ಸಾಕ್ಷಿಯಿಂದ ಪತಿಯ ಸಂವೇದನಾರಹಿತ ಹಾಗೂ ಸ್ವಾರ್ಥಬುದ್ಧಿಯ ನಡವಳಿಕೆಗಳು ಸೂರ್ಯನ ಬೆಳಕಿನಷ್ಟು ಸ್ಪಷ್ಟವಾಗಿ ಬೆಳಕಿಗೆ ಬಂದಿದ್ದು, ಇನ್ನಾವುದೇ ಪುರಾವೆ ಬೇಕಿಲ್ಲ ಎಂದು ಹೇಳಿತು.
1992 ರಲ್ಲಿ ಮಹಿಳೆಯು ವ್ಯಕ್ತಿಯೊಬ್ಬನಿಂದ ವಿವಾಹವಾಗಿದ್ದರು. ಆದರೆ, ಪತಿ ಹಿಂಸೆ ನೀಡುತ್ತಿದ್ದು ಹಾಗೂ ತನ್ನನ್ನು ತೊರೆದಿರುವುದರಿಂದ ವಿಚ್ಛೇದನೆ ನೀಡಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಳು. 2019 ರ ನವೆಂಬರ್ನಲ್ಲಿ ಕೌಟುಂಬಿಕ ನ್ಯಾಯಾಲಯ ಮಹಿಳೆಯ ವಾದ ಪುರಸ್ಕರಿಸಿ, ವಿವಾಹ ಅಸಿಂಧುಗೊಳಿಸಿತ್ತು.