ಹೈದರಾಬಾದ್: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತವೀಗ ನಿರ್ಣಾಯಕ ಹಂತ ತಲುಪಿದೆ. ಮಾಡು ಇಲ್ಲವೇ ಮಡಿ ಎಂಬಂತೆ ಕೋವಿಡ್ ಸೋಲಿಸಲು 130 ಕೋಟಿ ಭಾರತೀಯರು ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆ. ಮೊದಲ ಹಂತದ 21 ದಿನಗಳ ಲಾಕ್ಡೌನ್ ಮುಗಿದು 19 ದಿನಗಳ ಎರಡನೇ ಹಂತದ ಲಾಕ್ಡೌನ್ ಆರಂಭವಾಗಿದೆ. ಮುಂದಿನ ಒಂದು ವಾರ ಭಾರತದ ಪಾಲಿಗೆ ಕಠಿಣ ಸವಾಲಿನ ಅವಧಿಯಾಗಿದೆಯಾದರೂ ತುರ್ತು ಹಾಗೂ ಅಗತ್ಯ ಸೇವೆಗಳ ಕೊರತೆಯಾಗದಂತೆ ಏರ್ಪಾಟು ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಲಾಕ್ಡೌನ್ ಆರಂಭವಾದ ಮೊದಲ ದಿನ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 523 ಇದ್ದಿದ್ದು, ಇಂದಿಗೆ 11,000 ಮೀರಿ ಮತ್ತೂ ಮುನ್ನಡೆಯುತ್ತಿದೆ. ಆದಾಗ್ಯೂ ತುಂಬಾ ಆರಂಭಿಕ ಹಂತದಲ್ಲಿ ವಿಧಿಸಲಾದ ನಿರ್ಬಂಧಕ ಕ್ರಮಗಳಿಂದ ಸೋಂಕು ಹರಡುವಿಕೆ ಎಷ್ಟೋ ಪಾಲು ಕಡಿಮೆಯಾಗಿದೆ ಎಂದು ಸರ್ಕಾರ ಹೇಳಿದೆ. ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇನ್ನೊಂದೆಡೆ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಶತಾಯಗತಾಯ ಸೋಂಕು ಹರಡುವ ಕೊಂಡಿ ಕತ್ತರಿಸಲೇಬೇಕೆಂದು ಪಣ ತೊಟ್ಟಿರುವ ರಾಜ್ಯ ಸರ್ಕಾರಗಳು ರೆಡ್ ಝೋನ್ ಹಾಗೂ ಹಾಟ್ಸ್ಪಾಟ್ಗಳನ್ನು ಗುರುತಿಸಿ ಅಂಥ ಪ್ರದೇಶಗಳನ್ನು ಸೀಲ್ಡೌನ್ ಮಾಡುತ್ತಿವೆ.
ಕೋವಿಡ್ ಸೋಲಿಸುವ ಹೋರಾಟದಲ್ಲಿ ಇಡೀ ವಿಶ್ವದ ಅರ್ಥವ್ಯವಸ್ಥೆ ಶೂನ್ಯಕ್ಕೆ ಕುಸಿದಿದ್ದು ಅದಕ್ಕೆ ಭಾರತವೇನೂ ಹೊರತಾಗಿಲ್ಲ. ಆದರೆ ಈ ನಿರ್ಣಾಯಕ ಹೋರಾಟದಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಮತ್ತೆ ಪುಟಿದೇಳುವಂತೆ ಮಾಡಬೇಕಿರುವುದು ಅತಿ ಅಗತ್ಯವಾಗಿದೆ. ಸಂಪೂರ್ಣ ಲಾಕ್ಡೌನ್ನಿಂದ ರಾಜ್ಯಗಳ ಬೊಕ್ಕಸ ಖಾಲಿಯಾಗಿದೆ. ದಿನಗೂಲಿ ನೌಕರರು ಹಾಗೂ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಬದುಕುತ್ತಿದ್ದವರ ಜೀವನ ಮೂರಾಬಟ್ಟೆಯಾಗಿದೆ.
ಕಷ್ಟದಲ್ಲಿರುವ ಭಾರತೀಯರ ನೆರವಿಗಾಗಿ ಕೇಂದ್ರ ಸರ್ಕಾರ 1 ಲಕ್ಷ 70 ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಿಸಿದೆ. ಈ ಮೊತ್ತ ಭಾರತದ ಜಿಡಿಪಿಯ ಕೇವಲ ಶೇ. 0.8 ರಷ್ಟು ಮಾತ್ರ. ಮೂರು ವಾರಗಳ ಲಾಕ್ಡೌನ್ನಿಂದ ಈಗಾಗಲೇ ದೇಶಕ್ಕೆ 9 ಲಕ್ಷ ಕೋಟಿ ರೂಪಾಯಿ ಹಾನಿಯಾಗಿದ್ದನ್ನು ಪರಿಗಣಿಸಿದರೆ ಸರ್ಕಾರ ಘೋಷಿಸಿದ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಎಷ್ಟು ಚಿಕ್ಕದು ಎಂಬುದು ಅರಿವಾಗುತ್ತದೆ. ಈ ಅವಧಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮವೊಂದಕ್ಕೇ 1 ಲಕ್ಷ ಕೋಟಿ ರೂಪಾಯಿ ಹಾನಿ ಸಂಭವಿಸಿದೆ ಎಂದು ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಕೌನ್ಸಿಲ್ ಹೇಳಿಕೊಂಡಿದೆ.
ದೇಶದ ಮಧ್ಯಮ ಹಾಗೂ ಸಣ್ಣ ವಲಯದ ಉದ್ಯಮಕ್ಕೆ ಅತಿ ಹೆಚ್ಚು ಹೊಡೆತ ಬಿದ್ದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಣಕಾಸಿನ ಕೊರತೆಯಿಂದ ರಾಜ್ಯ ಸರ್ಕಾರಗಳೇ ವೇತನ ಕಡಿತ ಮಾಡುತ್ತಿರುವಾಗ ಹಾನಿಯಲ್ಲಿರುವ ಈ ಉದ್ಯಮ ವಲಯ ತನ್ನ ನೌಕರರಿಗೆ ಸಂಬಳ ಪಾವತಿ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಭಾರತದ ಶೇ.87 ರಷ್ಟು ಉದ್ಯಮ ವಲಯ ಅಸಂಘಟಿತ ಕ್ಷೇತ್ರಕ್ಕೆ ಸೇರಿದೆ ಎಂಬುದು ಗಮನಾರ್ಹ.
ದೇಶದ ಒಟ್ಟು ಶೇ.90 ರಷ್ಟು ಉದ್ಯೋಗಿಗಳು ಅಸಂಘಟಿತ ವಲಯದಲ್ಲೇ ಕೆಲಸ ಮಾಡುತ್ತಾರೆ. ಈಗ ಇವರೆಲ್ಲರ ಹೊಟ್ಟೆಪಾಡು ಹೇಗೆಂಬ ಚಿಂತೆಯ ಕಾರ್ಮೋಡ ಕವಿದಿದೆ. ದೇಶದ ಈ ಬಹುಸಂಖ್ಯಾತ ಉದ್ಯೋಗ ವರ್ಗಕ್ಕೆ ಜೀವನೋಪಾಯದ ಸುರಕ್ಷತೆ ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕಿದೆ. ಈ ಉದ್ಯೋಗ ವರ್ಗ ಆದಾಯ ರಹಿತವಾದಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಸಾಧ್ಯವೇ ಇಲ್ಲ. ಹಾಗೆಯೇ ಇನ್ನೇನು ಮುಂಗಾರು ಹಂಗಾಮು ಆರಂಭವಾಗಬೇಕೆನ್ನುವ ಸಮಯದಲ್ಲಿ ಲಾಕ್ಡೌನ್ನಿಂದ ಕೃಷಿ ಚಟುವಟಿಕೆಗಳೂ ಸ್ತಬ್ಧವಾಗಿವೆ. ಕೃಷಿ ಚಟುವಟಿಕೆಗಳು ತುರ್ತಾಗಿ ಆರಂಭವಾಗದಿದ್ದಲ್ಲಿ ದೇಶದಲ್ಲಿ ಆಹಾರ ಕೊರತೆ ಕಾಡುವ ಆತಂಕ ಎದುರಾಗಿದೆ. ಉದ್ಯಮವಲಯದ ಪ್ರಮುಖ ಸಂಘಟನೆಗಳಾದ ಫಿಕ್ಕಿ (FICCI) ಸೇರಿದಂತೆ ಇನ್ನಿತರ ಚಿಂತಕ ಅರ್ಥಶಾಸ್ತ್ರಜ್ಞರ ಸಲಹೆಗಳನ್ನು ಪಡೆದು ಸರ್ಕಾರ ಸೂಕ್ತ ಆರ್ಥಿಕ ಪುನಶ್ಚೇತನ ಕ್ರಮಗಳಿಗೆ ಮುಂದಾಗಬೇಕಿದೆ.