ಉನ್ನಾವೋ: 2019ರ ಜವರಿಯಿಂದ ನವೆಂಬರ್ವರೆಗೆ ಉನ್ನಾವೋದಲ್ಲಿ 90 ಅತ್ಯಾಚಾರ ಪ್ರಕರಣ ಹಾಗೂ 185 ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 63 ಕಿ.ಮೀ ಹಾಗೂ ಕಾನ್ಪುರ್ನಿಂದ 25 ಕಿಮೀ ದೂರದಲ್ಲಿರುವ ಉನ್ನಾವೋ ಜಿಲ್ಲೆಯಲ್ಲಿ 31 ಲಕ್ಷ ಜನರು ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ ಈ ಜಿಲ್ಲೆಯಲ್ಲಿ ಜನವರಿಯಿಂದ ನವೆಂಬರ್ ಅಂತ್ಯದವರೆಗೆ 90 ಅತ್ಯಾಚಾರ ಹಾಗೂ 185ಕ್ಕೂ ಹೆಚ್ಚು ಲೈಂಗಿತ ದೌರ್ಜನ್ಯದ ಪ್ರಕರಣಗಳು ದಾಖಲಾಗುವ ಮೂಲಕ ಉನ್ನಾವೋ ಉತ್ತರ ಪ್ರದೇಶದ ಅತ್ಯಾಚಾರದ ರಾಜಧಾನಿ(ರೇಪ್ ಕ್ಯಾಪಿಟಲ್)ಯಾಗಿ ಮಾರ್ಪಡುತ್ತಿದೆ.
ಈ ಪ್ರದೇಶಗಳಲ್ಲಿ ದೂರು ನೀಡಿದ ನಂತರ ಕೆಲವು ಆರೋಪಿಗಳ ಬಂಧನವಾದರೂ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರಬರುತ್ತಿದ್ದಾರೆ. ಮತ್ತೆ ಕೆಲವರು ಕಣ್ಮರೆಯಾಗುತ್ತಿದ್ದಾರೆ. ಇಲ್ಲಿನ ಪೊಲೀಸರು ಕೆಲವು ದೊಡ್ಡ ರಾಜಕಾರಣಿಗಳ ಜೊತೆಗೆ ಕೈ ಜೋಡಿಸಿದ್ದಾರೆ. ಯಾವುದೇ ಪ್ರಕರಣದಲ್ಲೂ ರಾಜಕಾರಣಿಗಳ ಆಜ್ಞೆಯಿಲ್ಲದೆ ಪೊಲೀಸರು ಮುಂದುವರಿಯುವುದಿಲ್ಲ ಎಂದು ಸ್ಥಳೀಯರ ಆರೋಪಿಸಿದ್ದಾರೆ.
ಇನ್ನೂ ಉನ್ನಾವೋದಲ್ಲಿ ಅಪರಾದ ಪ್ರಕರಣ ಜಾಸ್ತಿಯಾಗಲು ಸ್ಥಳೀಯ ರಾಜಕಾರಣಿಗಳು ಕಾರಣ. ಅವರು ರಾಜಕೀಯದಲ್ಲಿ ಭದ್ರವಾಗಿ ಬೇರೂರಲು ಅಪರಾಧ ಪ್ರಕರಣಗಳನ್ನು ಪ್ರೇರೇಪಿಸುತ್ತಿದ್ದಾರೆ. ಇವರಿಗೆ ಪೊಲೀಸರು ಕೂಡ ಸಹಾಯ ಮಾಡುತ್ತಿದ್ದಾರೆ ಎಂದು ಸ್ಥಳೀಯರ ಅಪವಾದವಾಗಿದೆ.
ಒಟ್ಟಿನಲ್ಲಿ ರಾಜಕಾರಣಿಗಳ ದಬ್ಬಾಳಿಕೆ, ಪೊಲೀಸರ ಅಸಮರ್ಥತೆ ನಡುವೆ ಉನ್ನಾವೋದ ಮುಗ್ಧ ಜನರು ಬಲಿಯಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ನ್ಯಾಯಕ್ಕಾಗಿ ಹೋರಾಡಲು ಮುಂದಾದ ಯುವತಿಯನ್ನು ಹಾಡಹಗಲೇ ಬೆಂಕಿಯಚ್ಚಿ ಕೊಲೆ ಮಾಡಲು ಯತ್ನಿಸಿರುವುದು. ಇದೀಗ ಆ ಯುವತಿ ಸಾವಿನ ನಂತರವಾದರೂ ಇನ್ಮುಂದೆ ಉನ್ನಾವೋ ಜಿಲ್ಲೆಯ ಕಡೆ ಅಲ್ಲಿನ ಸರ್ಕಾರ ಗಮನ ಹರಿಸಲಿದೆಯೇ ಕಾದುನೋಡಬೇಕಿದೆ.