ಜಮ್ಶೆಡ್ಪುರ (ಜಾರ್ಖಂಡ್): ಭಾರತ- ಚೀನಾದ ಪೂರ್ವ ಲಡಾಖ್ ಗಡಿಯಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ ಜಾರ್ಖಂಡ್‌ನ 22 ವರ್ಷದ ಗಣೇಶ್ ಹನ್ಸ್ಡಾ ಕೂಡ ಒಬ್ಬರು. ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ಅವರ ತಮ್ಮ ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಸೇನೆಗೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಗಣೇಶ್ ಹನ್ಸ್ಡಾಅವರು ಹುತಾತ್ಮರಾದ ಸುದ್ದಿ ಬುಧವಾರ ಬೆಳಗ್ಗೆ ಜಾರ್ಖಂಡ್‌ನ ಕೊಸಫಲಿಯಾ ಗ್ರಾಮದಲ್ಲಿರುವ ಅವರ ಕುಟುಂಬಸ್ಥರಿಗೆ ತಿಳಿದಿದೆ. ಈ ಸುದ್ದಿ ತಿಳಿದು ಕುಟುಂಬದವರಿಗೆ ಬರ ಸಿಡಿಲು ಬಡಿದಂತಾಗಿದೆ. ಗಣೇಶ್ ಹನ್ಸ್ಡಾ ಅವರು ತಮ್ಮ 21 ನೇ ವಯಸ್ಸಿನಲ್ಲಿ 2018 ರಲ್ಲಿ ಸೈನ್ಯಕ್ಕೆ ಸೇರಿದ್ದರು.
ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ ಗಣೇಶ್ ಅವರ ತಮ್ಮ,"ಅವಕಾಶ ಸಿಕ್ಕರೇ ನಾನು ಸೈನ್ಯಕ್ಕೆ ಸೇರಿ, ದೇಶಕ್ಕಾಗಿ ಹೋರಾಡಲು ಸಿದ್ಧನಿದ್ದೇನೆ. ರಾಷ್ಟ್ರವನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ನನ್ನ ಸಹೋದರನ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ದಿನೇಶ್ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.
ಶಾಸಕ ಸಮೀರ್ ಕುಮಾರ್ ಮೊಹಂತಿ ಮತ್ತು ಸಂಸದ ವಿದ್ಯಾತ್ ವರಣ್ ಮಹತೋ ಭೇಟಿ ನೀಡಿ, ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ.