ಲಖನೌ: ಸರ್ಕಾರಿ ಸಭೆಯ ವೇಳೆ ಅಧಿಕಾರಿಗಳು ಮೊಬೈಲ್ ಬಳಕೆ ಮಾಡದಂತೆ ಆದೇಶ ಹೊರಡಿಸಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇದೀಗ ಮತ್ತೊಂದು ನಿಯಮ ಜಾರಿಗೊಳಿಸಿದ್ದಾರೆ.
ಯೋಗಿ ಸರ್ಕಾರದ ನೂತನ ನಿಯಮದ ಅನ್ವಯ ಎಲ್ಲ ಸರ್ಕಾರಿ ಅಧಿಕಾರಿಗಳು ಬೆಳಗ್ಗೆ 9 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು. ತಡವಾಗಿ ಬಂದ ಅಧಿಕಾರಿಗಳ ವೇತನವನ್ನು ಕಡಿತಗೊಳಿಸಲಾಗುವುದು ಎಂದು ಕಟ್ಟುನಿಟ್ಟಾಗಿ ಹೇಳಲಾಗಿದೆ.
ಸಂಪುಟ ಸಭೆಗೆ ಮೊಬೈಲ್ ತರುವಂತಿಲ್ಲ,ಸಚಿವರಿಗೆ ಯೋಗಿ ಫರ್ಮಾನು!
ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ನಿತ್ಯ ಬೆಳಗ್ಗೆ 9ರಿಂದ 11 ಗಂಟೆ ತನಕ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಆಲಿಸಬೇಕು ಎನ್ನುವ ರೂಲ್ಸ್ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಸಾರ್ವಜನಿಕರ ದೂರನ್ನು ಆಲಿಸುತ್ತಿಲ್ಲ ಎನ್ನುವ ಮಾತಿಗೆ ಯೋಗಿ ಸರ್ಕಾರ ಈ ನಿಯಮ ಜಾರಿ ಮಾಡಿದೆ.
ಸದ್ಯ ಈ ನಿಯಮದಿಂದ ಕೊಂಚ ಬೇಸರಗೊಂಡಿರುವ ಸರ್ಕಾರಿ ಅಧಿಕಾರಿಗಳು ಕಚೇರಿಗೆ ಬರುವ ಸಮಯವನ್ನು ನಿಗದಿಗೊಳಿಸಿದಂತೆ ಕಚೇರಿಯಿಂದ ತೆರಳುವ ಸಮಯವನ್ನೂ ಫಿಕ್ಸ್ ಮಾಡಬೇಕು ಎಂದಿದ್ದಾರೆ.
ಉತ್ತರ ಪ್ರದೇಶದ ಎಲ್ಲ ಎಡಿಜಿಗಳಿಗೆ ಪತ್ರವೊಂದನ್ನು ಕಳುಹಿಸಲಾಗಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಾಗೂ ಭ್ರಷ್ಟ ಅಧಿಕಾರಿಗಳ ವಿವರವನ್ನು ಜೂನ್ 30ರ ಒಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.