ಹೈದರಾಬಾದ್ : ಕೊರೊನಾ ವೈರಸ್ ಹಾಗೂ ಲಾಕ್‌ಡೌನ್ ನಡುವೆಯೂ ನಿರುದ್ಯೋಗ ಪ್ರಮಾಣ ಅತ್ಯಂತ ವೇಗದ ಕುಸಿತಕ್ಕೆ 2020ರ ಜೂನ್ ಸಾಕ್ಷಿಯಾಗುತ್ತಿದೆ. ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ನಿರುದ್ಯೋಗ ಏರಿಕೆಯಾಗಿರುವಾಗ ಈ ಪ್ರಮಾಣದಲ್ಲಿನ ಕುಸಿತವು ನಾಟಕೀಯ ಬೆಳವಣಿಗೆಯಂತೆ ಗೋಚರಿಸುತ್ತಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ. 23.5ರಷ್ಟಿದ್ದ ನಿರುದ್ಯೋಗ ಪ್ರಮಾಣವು, ಜೂನ್ ಮೊದಲ ವಾರದಲ್ಲಿ ಶೇ. 17.5ಕ್ಕಿಳಿದಿದೆ. ನಂತರ 2ನೇ ವಾರದಲ್ಲಿ ಶೇ.11.6ಕ್ಕಿಳಿಯುವ ಮೂಲಕ ಈ ದರದಲ್ಲಿ ತೀವ್ರ ಕುಸಿತ ಕಂಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿಯ ಪ್ರಕಾರ, ಕಾರ್ಮಿಕ ಭಾಗವಹಿಸುವಿಕೆಯ ದರದಲ್ಲಿ ಹೆಚ್ಚಳವಾಗಿದೆ. ನಿರುದ್ಯೋಗ ದರದ ಕುಸಿತವು ದುಪ್ಪಟ್ಟಾಗಿದೆ.
ಜೂನ್ 14ರ ವೇಳೆಗೆ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಶೇ. 40.4ರಷ್ಟಿತ್ತು. ಈ ಕಾರ್ಮಿಕ ಭಾಗವಹಿಸುವಿಕೆಯ ದರ(LPR)ವು ಏಪ್ರಿಲ್ ಕೊನೆಯ ವಾರದಿಂದ ಚೇತರಿಸಿಕೊಳ್ಳುತ್ತಿದೆ. ಮೇ ಆರಂಭದಲ್ಲಿ ಶೇ. 36ರಷ್ಟಿದ್ದ ಈ ಪ್ರಮಾಣ ಚೇತರಿಕೆ ಕಂಡ ಬಳಿಕ ಜೂನ್ 14 ವಾರದಲ್ಲಿ ಶೇ. 40.4ಕ್ಕೆ ಬಂದು ತಲುಪಿದೆ. ಕಾರ್ಮಿಕ ಭಾಗವಹಿಸುವಿಕೆಯ ದರದ ಹೆಚ್ಚಳವು ನಿರುದ್ಯೋಗ ಪ್ರಮಾಣದ ಕುಸಿತದೊಂದಿಗೆ ಉದ್ಯೋಗ ಪ್ರಮಾಣದ ಹೆಚ್ಚಳ ಸೂಚಿಸುತ್ತದೆ. ಉದ್ಯೋಗ ಪ್ರಮಾಣದ ಹೆಚ್ಚಳವು ಅಪೇಕ್ಷಿತ ಫಲಿತಾಂಶವಾಗಿದೆ. ಇದು ನಿರುದ್ಯೋಗ ದರಕ್ಕಿಂತ ಆರ್ಥಿಕತೆಯ ಆರೋಗ್ಯದ ಪ್ರಮುಖ ಸೂಚಕವಾಗಿದೆ.
ಭಾರತದಲ್ಲಿ ಉದ್ಯೋಗದ ಪ್ರಮಾಣವು ಶೇ.40ಕ್ಕಿಂತ ಕಡಿಮೆಯಾಗಿದೆ. 14 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಶೇ.40ಕ್ಕಿಂತ ಕಡಿಮೆ ಜನರು ಉದ್ಯೋಗದಲ್ಲಿದ್ದಾರೆ ಎಂದು ಇದು ಸೂಚಿಸುತ್ತದೆ. ವಿಶ್ವ ಬ್ಯಾಂಕ್ನ ಅಂಕಿ-ಅಂಶಗಳ ಪ್ರಕಾರ, ಜಾಗತಿಕ ಸರಾಸರಿ ಉದ್ಯೋಗ ಪ್ರಮಾಣವು 2019ರಲ್ಲಿ ಶೇ.57.4ರಷ್ಟಿತ್ತು.
ಭಾರತದಲ್ಲಿ ಲಾಕ್‌ಡೌನ್ ಹೇರಿದ ತಕ್ಷಣ ಉದ್ಯೋಗ ದರವು ಭಾರಿ ಪ್ರಮಾಣದಲ್ಲಿ ಅಂದರೆ ಶೇ.10ರಷ್ಟು ಕುಸಿಯಿತು. ಫೆಬ್ರವರಿ 2020ರಲ್ಲಿ ಸರಾಸರಿ ಉದ್ಯೋಗ ದರವು ಶೇ. 39.5 ರಷ್ಟಿತ್ತು. ಲಾಕ್‌ಡೌನ್‌ನ ಆರಂಭವಾದ ಮಾರ್ಚ್ 29ರ ಮೊದಲ ವಾರದಲ್ಲಿ ಇದು ಶೇಕಡಾ 29.9ಕ್ಕೆ ಕುಸಿದಿದೆ. ಈ ಪ್ರಮಾಣ ಏಪ್ರಿಲ್ 19ರ ವಾರದಲ್ಲಿ ಶೇ. 26.1ರಷ್ಟಕ್ಕೆ ಬಂದಿಳಿದಿತ್ತು.
ಆದರೆ, ನಂಬಲಸಾಧ್ಯ ಎಂಬಂತೆ 2020ರ ಮೇ ಆರಂಭದಿಂದಲೂ ಉದ್ಯೋಗದ ಪ್ರಮಾಣ ಏರಿಕೆಯಾಗುತ್ತಿದೆ. ಅದರಲ್ಲೂ ಜೂನ್ 14ರ ಇತ್ತೀಚಿನ ವಾರದಲ್ಲಿ ಈ ಪ್ರಮಾಣದ ಏರಿಕೆಯು ಇನ್ನೂ ಸ್ಮಾರ್ಟ್ ಆಗಿ ಆಗುತ್ತಿದೆ. ಮತ್ತೆ ಚೇತರಿಕೆ ಪಡೆದಿರುವ ಉದ್ಯೋಗ ದರವು ಜೂನ್ 7ಕ್ಕೆ ಕೊನೆಗೊಂಡ ವಾರದಲ್ಲಿ ಶೇ. 32.4ರಿಂದ ಜೂನ್ 14ಕ್ಕೆ ಕೊನೆಗೊಂಡ ವಾರದಲ್ಲಿ ಶೇ 35.7 ಕ್ಕೆ ಬಂದು ನಿಂತಿದೆ. ಲಾಕ್‌ಡೌನ್ ನಡುವೆಯೂ ನಿರುದ್ಯೋಗ ಪ್ರಮಾಣ ಕುಸಿತ ಕಂಡು ಉದ್ಯೋಗ ಪ್ರಮಾಣವು ಏರಿಕೆಯಾಗಿರುವುದು ಅಚ್ಚರಿ ಮೂಡಿಸಿದ್ದರೂ ಸಂತಸ ತಂದಿದೆ.