ನವದೆಹಲಿ : ಫರಿದಾಬಾದ್‌ನಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ನೆರೆಮನೆಯ ವ್ಯಕ್ತಿ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಆ ಕಾಮುಕ ಸಂತ್ರಸ್ತೆ ತನ್ನ ಒಡಹುಟ್ಟಿದವರ ಮಧ್ಯೆ ಮಲಗಿದ್ದಾಗ ಕೋಣೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯಾದ ಅರ್ಧ ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸರನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಫರಿದಾಬಾದ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಅಲ್ಲಿಂದ ಸಂತ್ರಸ್ತೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
'ನಾನು ಮತ್ತು ನನ್ನ ಗಂಡ ಛಾವಣಿಯ ಮೇಲೆ ಮಲಗಿದ್ದೆವು ಮತ್ತು ನನ್ನ ಮೂವರು ಮಕ್ಕಳು ಕೋಣೆಯಲ್ಲಿ ಮಲಗಿದ್ದರು. ಮುಂಜಾನೆ 1 ಗಂಟೆ ಸುಮಾರಿಗೆ ರಕ್ತಸ್ರಾವದಿಂದಾಗಿ ಕಿರಿಯ ಮಗಳು ಅಳುತ್ತಿದ್ದಾಳೆ ಅಂತಾ ನನ್ನ ಹಿರಿಯ ಮಗಳು ಕಣ್ಣೀರು ಹಾಕುತ್ತ ಬಂದು ಹೇಳಿದಳು. ಹಾಗಾಗಿ ನಾನು ಒಳಗೆ ಧಾವಿಸಿದೆ' ಎಂದು ಸಂತ್ರಸ್ತೆಯ ತಾಯಿ ಹೇಳಿದರು.
ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆಯು ತಕ್ಷಣವೇ ಒಂದು ತಂಡ ರಚಿಸಿತ್ತು. ನೆರೆಹೊರೆಯವರಲ್ಲಿ ಒಬ್ಬನಾಗಿದ್ದ ಆರೋಪಿಯನ್ನು ಅರ್ಧ ಗಂಟೆಯೊಳಗೆ ಬಂಧಿಸಲಾಗಿದೆ. ಆತ ಬಿಹಾರದ ಬಕ್ಸಾರ್ ಮೂಲದವನಾಗಿದ್ದು, ವಿವಾಹಿತನಾಗಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಧರಣ್ ಯಾದವ್ ತಿಳಿಸಿದರು.