ನವದೆಹಲಿ: ದೇಶ ವಿದೇಶಗಳಲ್ಲಿ ಭೀತಿ ಹುಟ್ಟಿಸಿರುವ ಡೆಡ್ಲಿ ವೈರಸ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಇಡೀ ಭಾರತವೇ ಒಂದಾಗಿದ್ದು, ಮಹಾಮಾರಿ ಹೊಡೆದೋಡಿಸಲು ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಿಗ್ಗಜ ಮುದ್ರಣ ಮಾಧ್ಯಮದ ಪತ್ರಕರ್ತರೊಂದಿಗೆ ನಮೋ ಸಂವಾದ ನಡೆಸಿದರು.
ಬೆಳಗ್ಗೆ ನಡೆದ ವಿಡಿಯೋ ಕಾನ್ಪರೆನ್ಸ್ನಲ್ಲಿ ಅನೇಕ ಮಾಧ್ಯಮ ದಿಗ್ಗಜರು ಭಾಗಿಯಾಗಿದ್ದು, ರಾಮೋಜಿ ಗ್ರೂಪ್ ಆಫ್ ಕಂಪನಿಗಳ ಮುಖ್ಯಸ್ಥರಾಗಿರುವ ರಾಮೋಜಿ ರಾವ್ ಅವರು ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹತ್ವದ ಸಲಹೆ ನೀಡಿದರು.
ಪ್ರತಿಷ್ಠಿತ ಈನಾಡು ದಿನಪತ್ರಿಕೆಯ ಮುಖ್ಯಸ್ಥರಾಗಿರುವ ರಾಮೋಜಿ ರಾವ್ ಅವರು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪ್ರಧಾನಿ ಮೋದಿಯವರೊಂದಿಗೆ ಕೆಲವೊಂದು ಮಹತ್ವದ ವಿಚಾರ ಹಂಚಿಕೊಳ್ಳುವುದರ ಜತೆಗೆ ಅಮೂಲ್ಯ ಸಲಹೆ ನೀಡಿದರು.
ರಾಮೋಜಿ ರಾವ್ ನೀಡಿರುವ ಸಲಹೆ: ಗ್ರಾಮೀಣ ಪ್ರದೇಶದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ರಾಮೋಜಿ ರಾವ್ ಅವರು ಮನವಿ ಮಾಡಿದ್ದಾರೆ. ಶೇ.65ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದಿದ್ದಾರೆ. ಜತೆಗೆ ಆರೋಗ್ಯ ದೃಷ್ಟಿಯಿಂದ ವಿಂಗಡಣೆ ಮಾಡುವ ಅವಶ್ಯಕತೆ ಇದೆ ಎಂದಿದ್ದಾರೆ.
ಎಲ್ಲ ಹಳ್ಳಿಗಳಲ್ಲೂ ಇದರ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದ್ದು, ಜನರಿಗೆ ಇದರ ಬಗ್ಗೆ ತಿಳಿಸುವ ಕೆಲಸವನ್ನ ಮಾಧ್ಯಮದ ಮೂಲಕ ನಾವು ಮಾಡುತ್ತಿದ್ದೇವೆ. ಆದರೆ ಹೆಚ್ಚು ಕಠಿಣ ಕ್ರಮ ಅಗತ್ಯವೆಂದು ನನಗೆ ಅನಿಸುತ್ತಿದ್ದು, ಗ್ರಾಮೀಣ ಭಾಗದ ಜನರನ್ನ ವಿಂಗಡಿಸಿ ಆರೋಗ್ಯ ವ್ಯವಸ್ಥೆ ಕುರಿತು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಚೀನಾ ಮತ್ತು ಇಟಲಿಯಲ್ಲಿ ಇದರ ಕರಾಳತೆ ಭೀಕರವಾಗಿದ್ದು, ಅದರಿಂದ ಪಾಠ ಕಲಿಯಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಸರ್ಕಾರಗಳನ್ನ ಬಿಟ್ಟು ಬೇರೆ ಯಾವೆಲ್ಲ ಕ್ರಮ ಕೈಗೊಳ್ಳಲು ಸಾಧ್ಯ ಎಂಬುದರ ಕುರಿತು ಪರಾಮರ್ಶೆ ನಡೆಸುವ ಅವಶ್ಯಕತೆ ಇದೆ ಎಂದಿರುವ ರಾಮೋಜಿ ರಾವ್, ಕೊರೊನಾ ವೈರಸ್ ಆದಷ್ಟು ಬೇಗ ತಡೆಗಟ್ಟಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದದ ವೇಳೆ ದೇಶದ 20 ಮಾಧ್ಯಮ ದಿಗ್ಗಜರೊಂದಿಗೆ ಸಂವಾದ ನಡೆಸಿ ಮಹತ್ವದ ಮಾಹಿತಿ ಪಡೆದುಕೊಂಡರು.