ಮಥುರಾ: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯಸ್ಥ ಮಹಂತ ನೃತ್ಯ ಗೋಪಾಲ್ ದಾಸ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೋವಿಡ್ ಟೆಸ್ಟ್ ಬಳಿಕ ಮಹಂತ ನೃತ್ಯ ಅವರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಚಿಕಿತ್ಸೆಗಾಗಿ ದೆಹಲಿಯ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಮಾಹಿತಿ ಪಡೆದಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಂತ ಅವರಿಗೆ ಸಕಲ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ತಕ್ಷಣವೇ ಚಿಕಿತ್ಸೆ ನೀಡುವಂತೆ ಡಾ. ಟ್ರೆಹನ್ಗೆ ಸೂಚಿಸಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗಾಗಿ ಮಥುರಾಗೆ ತೆರಳಿದ್ದ ಗೋಪಾಲ್ ದಾಸ್, ನಾಲ್ಕು ದಿನಗಳಿಂದ ಅಲ್ಲಿನ ಸೀತಾರಾಮ್ ಮಂದಿರದಲ್ಲಿ ತಂಗಿದ್ದರು. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ವೈದ್ಯರ ತಂಡವೊಂದು ಚಿಕಿತ್ಸೆಗಾಗಿ ಧಾವಿಸಿದೆ. ಅಲ್ಲದೆ ಅವರ ಆರೋಗ್ಯ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ. ಜಿಲ್ಲಾಡಳಿತದ ಅಧಿಕಾರಿಗಳೂ ಕೂಡ ಸ್ಥಳಕ್ಕೆ ಧಾವಿಸಿದ್ದು, ಕೋವಿಡ್ ನಿರ್ದೇಶನಗಳನ್ನು ಪಾಲಿಸುತ್ತಿದ್ದಾರೆ.
ಮಹಂತ ನೃತ್ಯ ಗೋಪಾಲ್ ದಾಸ್, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ 'ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಮುಖ್ಯಸ್ಥರಾಗಿದ್ದು, ಆ. 5ರಂದು ನಡೆದ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಇತರ ಗಣ್ಯರೊಂದಿಗೆ ಭಾಗವಹಿಸಿದ್ದರು.