ನವದೆಹಲಿ: ಈ ತಿಂಗಳ ಆರಂಭದಲ್ಲಿ ಲಡಾಖ್‌ನಲ್ಲಿ ಭಾರತೀಯ ಮತ್ತು ಚೀನಾ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಗಡಿ ಸಂಘರ್ಷದ ಘಟನೆ ಬೆನ್ನಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ರಷ್ಯಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಯಲ್ಲಿ ಭಾರತದ ಪ್ರಮುಖ ಆದ್ಯತೆಯೆಂದರೆ ಆದಷ್ಟು ಬೇಗ ಮಾಸ್ಕೋದಿಂದ ಎಸ್ - 400 ವಾಯು ರಕ್ಷಣಾ ಕ್ಷಿಪಣಿಯನ್ನ ಭಾರತಕ್ಕೆ ತರುವುದಾಗಿದೆ.
2018ರಲ್ಲಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯ ನಡುವೆ ಭಾರತ ಮತ್ತು ರಷ್ಯಾ $ 5.4 ಬಿಲಿಯನ್ ಕ್ಷಿಪಣಿ ಒಪ್ಪಂದಕ್ಕೆ ಸಹಿ ಹಾಕಿದ್ದವು. 2018ರ ಜನವರಿಯಲ್ಲಿ ಅಮೆರಿಕದ ಎದುರಾಳಿಗಳ ವ್ಯವಹಾರ ನಿರ್ಬಂಧಗಳ ಕಾಯ್ದೆ (ಸಿಎಎಟಿಎಸ್ಎ) ಜಾರಿಗೆ ಬಂದ ನಂತರ ಎಸ್ -400 ಕ್ಷಿಪಣಿ ಒಪ್ಪಂದವು ಹೆಚ್ಚು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಕಾಯ್ದೆಯು ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ರಕ್ಷಣಾ ಕಂಪನಿಗಳೊಂದಿಗೆ ವ್ಯಾಪಾರ ಮಾಡುವ ದೇಶಗಳನ್ನು ಗುರಿಯಾಗಿಸುತ್ತದೆ. ಹೀಗಾಗಿ, ಈ ಒಪ್ಪಂದ ಕೊಂಚ ಗೊಂದಲಕ್ಕೆ ಕಾರಣವಾಗಿತ್ತು.
ಉಕ್ರೇನ್ ಮತ್ತು ಸಿರಿಯಾ ಯುದ್ಧದಲ್ಲಿ ರಷ್ಯಾದ ಕೈವಾಡ ಮತ್ತು 2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಸ್ಕೋ ಹಸ್ತಕ್ಷೇಪ ಆರೋಪದ ಹಿನ್ನೆಲೆ ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರುವ ಉದ್ದೇಶದಿಂದ ಅಮೆರಿಕದ ಸೆನೆಟರ್ ಗುಂಪು ಈ ಕಾಯ್ದೆಯನ್ನ ಜಾರಿ ಮಾಡಿತ್ತು.
ಭಾರತದ ಜೊತೆ ಒಪ್ಪಂದದ ಅನ್ವಯ ರಷ್ಯಾವು ಅಕ್ಟೋಬರ್ 2020 ಮತ್ತು ಏಪ್ರಿಲ್ 2023 ರ ನಡುವೆ ಕ್ಷಿಪಣಿಗಳನ್ನ ತಲುಪಿಸಬೇಕಾಗಿದೆಯಾದರೂ, ಈ ವರ್ಷದ ಆರಂಭದಲ್ಲಿ ನವದೆಹಲಿಯ ರಷ್ಯಾದ ರಾಯಭಾರ ಕಚೇರಿಯು ರಷ್ಯಾ ಜೊತೆಗಿನ ಈ ಕ್ಷಿಪಣಿಯ ವ್ಯವಹಾರಗಳು ವಿಶ್ವದಾದ್ಯಂತ 16 ಬಿಲಿಯನ್ ದಾಟಿದ್ದರಿಂದ ವಿತರಣೆಯನ್ನು 2025 ರವರೆಗೆ ವಿಳಂಬಗೊಳಿಸಲಾಗಿದೆ ಎಂದು ತಿಳಿಸಿತ್ತು.
ಈ ತಿಂಗಳ ಲಡಾಖ್‌ನಲ್ಲಿ ನಡೆದ ಹಿಂಸಾತ್ಮಕ ಗಡಿ ಘರ್ಷಣೆಯ ನಂತರ ಭಾರತ - ಚೀನಾ ಸಂಬಂಧಗಳಲ್ಲಿ ಬಿರುಕು ಮೂಡಿವೆ. ಇತ್ತೀಚಿನ ಘರ್ಷಣೆ ಹಿನ್ನೆಲೆಯಲ್ಲಿ ಭಾರತವು ಈ ಕ್ಷಿಪಣಿಯನ್ನ ಶೀಘ್ರದಲ್ಲಿಯೇ ಪಡೆಯಲು ಉತ್ಸುಕವಾಗಿದೆ. ಯಾಕೆಂದರೆ, ಈಗಾಗಲೇ, ಚೀನಾ ರಷ್ಯಾದಿಂದ ಈ ಕ್ಷಿಪಣಿ ತರಿಸಿಕೊಂಡು ತಯಾರಿಯಲ್ಲಿ ತೊಡಗಿದೆ.
ಸೋಮವಾರ ಮಾಸ್ಕೋಗೆ ತೆರಳುವ ಮುನ್ನ, ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಈ ಭೇಟಿ ಭಾರತ - ರಷ್ಯಾ ರಕ್ಷಣಾ ಮತ್ತು ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಮಾರ್ಗಗಳ ಕುರಿತು ಮಾತುಕತೆ ನಡೆಸಲು ನನಗೆ ಅವಕಾಶ ನೀಡಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ರಷ್ಯಾವು "ವಿಶೇಷ ಮತ್ತು ಸವಲತ್ತು ಕಾರ್ಯತಂತ್ರದ ಸಹಭಾಗಿತ್ವ ಹೊಂದಿದ್ದು, ರಷ್ಯಾವು ಭಾರತಕ್ಕೆ ರಕ್ಷಣಾ ಸಾಧನಗಳ ಪ್ರಮುಖ ಪೂರೈಕೆದಾರ ದೇಶವಾಗಿ ಮುಂದುವರೆದಿದೆ. ಚೀನಾ ದೇಶವು ಈಗಾಗಲೇ ರಷ್ಯಾದಿಂದ ಎಸ್ - 400 ಕ್ಷಿಪಣಿ ವ್ಯವಸ್ಥೆ ಪಡೆದುಕೊಂಡಿರುವುದರಿಂದ, ಇದು ಭಾರತದ ಹೆಚ್ಚುವರಿ ಕಾಳಜಿಯ ವಿಷಯವಾಗಿದೆ ಎಂದು ವರದಿಗಳು ಹೇಳುತ್ತವೆ.
ಇಂದು ಮಾಸ್ಕೋದಲ್ಲಿ ನಡೆಯಲಿರುವ ರಷ್ಯಾದ 2ನೇ ಮಹಾಯುದ್ಧದ 75ನೇ ವಿಜಯ ದಿನದ ಮೆರವಣಿಗೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ರಾಜನಾಥ್ ಸಿಂಗ್, ಬಳಿಕ ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಈ ಅವಧಿಯಲ್ಲಿ ಎಸ್ - 400 ಕ್ಷಿಪಣಿ ವ್ಯವಸ್ಥೆಯನ್ನ ಆದಷ್ಟು ಬೇಗ ಭಾರತಕ್ಕೆ ಕೊಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ರಾಜತಾಂತ್ರಿಕ ವೀಕ್ಷಕರ ಪ್ರಕಾರ, ಚೀನಾದ ಗಡಿಯಲ್ಲಿ ಅನಿಶ್ಚಿತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಸ್ - 400 ಕ್ಷಿಪಣಿ ವ್ಯವಸ್ಥೆಯನ್ನು ಆದಷ್ಟು ಬೇಗ ಪಡೆದುಕೊಳ್ಳುವುದು ಭಾರತಕ್ಕೆ ಪ್ರಮುಖ ಆದ್ಯತೆಯಾಗಿದೆ.
"ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮಾಸ್ಕೋ ಪ್ರವಾಸದ ಒಂದು ಪ್ರಮುಖ ಕಾರ್ಯಸೂಚಿಯೆಂದರೆ, ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ತ್ವರಿತವಾಗಿ ತಲುಪಿಸಲು ರಷ್ಯನ್ನರನ್ನು ಮನವೊಲಿಸುವುದು" ಎಂದು ನವದೆಹಲಿ ಮೂಲದ ಕಾರ್ಯತಂತ್ರದ ವ್ಯವಹಾರಗಳ ತಜ್ಞ ನಿತಿನ್ ಎ. ಗೋಖಲೆ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಭಾರತದ ಆದ್ಯತೆಯನ್ನು ಪರಿಗಣಿಸುವಂತೆ ರಾಜನಾಥ್ ಸಿಂಗ್ ರಷ್ಯಾ ಸರ್ಕಾರವನ್ನ ವಿನಂತಿಸುವ ನಿರೀಕ್ಷೆಯಿದೆ ಮತ್ತು 2021 ರ ವೇಳೆಗೆ ಕನಿಷ್ಠ ಎರಡು ಕ್ಷಿಪಣಿ ವ್ಯವಸ್ಥೆಗಳನ್ನು ಭಾರತಕ್ಕೆ ನೀಡುವಂತೆ ಕೇಳಬಹುದು ಎಂದು ವಿಶ್ವಾಸಾರ್ಹ ಮೂಲಗಳು ಹೇಳುತ್ತದೆ.
ಒಪ್ಪಂದದ ಪ್ರಕಾರ, ರಷ್ಯಾ ದೇಶವು ಭಾರತಕ್ಕೆ ಐದು ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನ ಪೂರೈಸಲಿದೆ.