ಉದಯಪುರ್: ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಉರುಳಿಸಲು ಶಾಸಕರಿಗೆ ಆಮಿಷವೊಡ್ಡಿದ ಪ್ರಕರಣದ ಬಗ್ಗೆ ತನಿಖೆಗೆ ನಡೆಸುತ್ತಿರುವ ವಿಶೇಷ ಪೊಲೀಸ್ ತಂಡ (ಎಸ್ಒಪಿ) ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.25 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದೆ.
ಭಾರೀ ಪ್ರಮಾಣದಲ್ಲಿ ಹಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಐಡಿ ಎಸ್ಪಿ ವಿಕಾಸ್ ಶರ್ಮಾ ನೇತೃತ್ವದ ಎಂಟು ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಉದಯಪುರ ಬಳಿ ಎರಡು ಕಾರುಗಳಲ್ಲಿ ಸಾಗಿಸುತ್ತಿದ್ದ ಹಣವನ್ನು ಪತ್ತೆ ಹಚ್ಚಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಭೂ ನೋಂದಣಿಗೆ ಈ ಹಣವನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಕಳೆದ ವಾರ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಆಡಿಯೋ ಒಂದು ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಒಪಿ ಸಂಜಯ್ ಶರ್ಮಾ ಎಂಬಾತನನ್ನು ಬಂಧಿಸಿತ್ತು.
ವೈರಲ್ ಆದ ಆಡಿಯೋ ಸಚಿನ್ ಪೈಲಟ್ ಬಣದ ಬಂಡಾಯ ಶಾಸಕ ಭನ್ವರ್ಲಾಲ್ ಶರ್ಮಾ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನಡುವಿನ ಸಂಭಾಷಣೆಯದ್ದು ಎಂದು ಹೇಳಲಾಗ್ತಿದೆ. ಈ ಕುರಿತು ಎಸ್ಒಪಿ ತನಿಖೆ ಮುಂದುವರೆಸಿದೆ.
ಈ ನಡುವೆ ಭನ್ವರ್ಲಾಲ್ ಶರ್ಮಾ, ಗಜೇಂದ್ರ ಸಿಂಗ್ ಮತ್ತು ಸಂಜಯ್ ಜೈನ್ ವಿರುದ್ಧ ದೇಶದ್ರೋಹ ಆರೋಪದಡಿ ತನಿಖೆ ನಡೆಸಿ ಎಫ್ಐಆರ್ ನೋಂದಾಯಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖ್ಯಸ್ಥ ಮಹೇಶ್ ಜೋಶಿ ಆಗ್ರಹಿಸಿದ್ದಾರೆ.