ಜೈಪುರ(ರಾಜಸ್ಥಾನ): ಸುತ್ತಮುತ್ತಲಿನ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜಸ್ಥಾನ ಸರ್ಕಾರ ತನ್ನ ಆರು ನೆರೆಹೊರೆಯ ರಾಜ್ಯಗಳಿಗೆ ಕೋವಿಡ್-19 ಪರೀಕ್ಷಾ ಸೌಲಭ್ಯ ಒದಗಿಸುವುದಾಗಿ ತಿಳಿಸಿದೆ.
ಸಾಂಕ್ರಾಮಿಕ ರೋಗದ ಈ ನಿರ್ಣಾಯಕ ಸಮಯದಲ್ಲಿ ಅಗತ್ಯವಿದ್ದರೆ ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಮತ್ತು ಗುಜರಾತ್ ಸೇರಿದಂತೆ ಆರು ನೆರೆಯ ರಾಜ್ಯಗಳ 5,000 ಶಂಕಿತರು ಪ್ರತಿದಿನ ರಾಜಸ್ಥಾನದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಅಶೋಕ್ ಗೆಹ್ಲೋಟ್ ಭಾನುವಾರ ರಾತ್ರಿ ಪ್ರಕಟಿಸಿದ್ದಾರೆ.
ಈ ಸಂದರ್ಭ ಆಸ್ಪತ್ರೆಗಳಲ್ಲಿ ಹೆಚ್ಚು ಆಮ್ಲಜನಕದ ಪೂರೈಕೆಯ ಅಗತ್ಯವಿದ್ದು, ಜುಲೈ ಅಂತ್ಯದ ವೇಳೆಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಲಿಂಡರ್‌ಗಳ ಬದಲು ಪೈಪ್‌ಲೈನ್ ಮೂಲಕ ಆಮ್ಲಜನಕ ಪೂರೈಕೆಯಾಗಲಿದೆ ಎಂದು ಮುಖ್ಯಮಂತ್ರಿ ಇದೇ ವೇಳೆ ಘೋಷಿಸಿದ್ದಾರೆ.
ದೇಶದಲ್ಲಿ ಕೊರೊನಾ ಚೇತರಿಕೆ ಮತ್ತು ಪರೀಕ್ಷಾ ಸೌಲಭ್ಯದ ವಿಷಯದಲ್ಲಿ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಅದರ ಚೇತರಿಕೆ ಪ್ರಮಾಣವು ಶೇಕಡಾ 75 ರಷ್ಟಿದ್ದರೆ, ಭಾನುವಾರ ರಾತ್ರಿಯವರೆಗೆ ಇದು ಒಟ್ಟು 5,98,920 ಮಂದಿಯನ್ನು ಪರೀಕ್ಷಿಸಿದೆ ಎಂದು ಅಲ್ಲಿನ ಹೆಚ್ಚುವರಿ ಮುಖ್ಯ ಆರೋಗ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಖಚಿತಪಡಿಸಿದ್ದಾರೆ.