ಜೈಪುರ (ರಾಜಸ್ಥಾನ): ಕೊರೊನಾ ಸಂಕಷ್ಟದ ವೇಳೆ ಅವಶ್ಯಕತೆ ಇದ್ದವರಿಗೆ ಆಹಾರ ಹಾಗೂ ಅವಶ್ಯಕ ವಸ್ತುಗಳನ್ನು ವಿತರಿಸುವಾಗ ಫೋಟೋ ತೆಗೆದುಕೊಳ್ಳುವುದನ್ನು ರಾಜಸ್ಥಾನ ಸರ್ಕಾರ ನಿಷೇಧಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೆಲವರು ಪ್ರಚಾರಕ್ಕಾಗಿ ಬಡವರಿಗೆ ಆಹಾರ ಮತ್ತು ಪಡಿತರ ನೀಡುತ್ತಿದ್ದಾರೆ. ಇದನ್ನು ಸೇವೆಯೆಂದು ಭಾವಿಸಬೇಕು, ಪ್ರಚಾರದ ಮಾಧ್ಯಮವಾಗಿ ಬಳಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದರಿಂದಾಗಿ ಆಹಾರ ವಿತರಣೆಯ ಸಂದರ್ಭದಲ್ಲಿ ಫೋಟೋ ತೆಗೆದುಕೊಳ್ಳುವುದನ್ನು ನಿಷೇಧ ಮಾಡಲಾಗಿದೆ ಎಂದ ಗೆಹ್ಲೋಟ್ ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರೇತರ ಸಂಸ್ಥೆಗಳು ಹಾಗೂ ಇತರ ಸಂಘಟನೆಗಳು ಅವಶ್ಯಕತೆ ಇರುವವರ ನೆರವಿಗೆ ಧಾವಿಸಲು ಜಿಲ್ಲಾಧಿಕಾರಿಗಳು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದರ ಜೊತೆಗೆ ಆಹಾರ ವಿತರಣೆಯ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದ್ದಾರೆ.