ಹೈದರಾಬಾದ್ (ತೆಲಂಗಾಣ): ಮಂಗಳವಾರದಿಂದ ತೆಲಂಗಾಣದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಾಜ್ಯದಲ್ಲಿ 30 ಮಂದಿ ಬಲಿಯಾಗಿದ್ದಾರೆ. ಹೈದರಾಬಾದ್‌ನಲ್ಲೇ 19 ಮಂದಿ ಸಾವನ್ನಪ್ಪಿದ್ದಾರೆ.
ಮಹಾಮಳೆಯಿಂದಾಗಿ ಹೈದರಾಬಾದ್ ಮತ್ತು ಅದರ ಉಪನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಣಾಮ 19 ಜನರು ಸಾವನ್ನಪ್ಪಿದ್ದು, ನಾಲ್ವರು ಕಾಣೆಯಾಗಿದ್ದಾರೆ. ನಿರಂತರ ಮಳೆಯಿಂದಾಗಿ ಸರೋವರಗಳು, ಟ್ಯಾಂಕ್‌ಗಳು, ನದಿಗಳು ಮತ್ತು ತೊರೆಗಳು ಉಕ್ಕಿ ಹರಿದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹಾನಿಗೊಳಗಾದ ಪ್ರದೇಶಗಳಲ್ಲಿನ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಎನ್ಡಿಆರ್ಎಫ್ ತಂಡ ಸಕ್ರಿಯವಾಗಿ ತೊಡಗಿಕೊಂಡಿದೆ. ಜಲಾವೃತ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ದೋಣಿಗಳನ್ನು ನಿಯೋಜಿಸಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 2 ಹೆಲಿಕಾಪ್ಟರ್‌ಗಳನ್ನು ಸಹ ಇರಿಸಲಾಗಿದೆ.
ಹೈದರಾಬಾದ್‌ನ ಬಂಡಲಗುಡ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಗೋಡೆ ಕುಸಿದು 9 ಜನರು ಸಾವನ್ನಪ್ಪಿದರೆ, ಇತರೆ ಘಟನೆಯಲ್ಲಿ 10 ಜನರು ಮೃತಪಟ್ಟಿದ್ದಾರೆ.
ನಗರದ ಹೊರವಲಯದಲ್ಲಿರುವ ಗಗನ್‌ಪಹಾದ್ ಪ್ರದೇಶದಲ್ಲಿನ ನೀರಿನ ರಭಸಕ್ಕೆ ಮೂವರು ಕೊಚ್ಚಿಕೊಂಡು ಹೋಗಿದ್ದಾರೆ. ಚಂದ್ರಯಂಗುಟ್ಟದ ಅಲ್-ಜುಬೈಲ್ ಕಾಲೋನಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಗಾಜಿ-ಎ-ಮಿಲ್ಲತ್ ಕಾಲೋನಿಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಬಂಜಾರ ಹಿಲ್ಸ್‌ನಲ್ಲಿ ವೈದ್ಯರೊಬ್ಬರು ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದ ನೆಲ ಮಾಳಿಗೆಯಿಂದ ನೀರನ್ನು ಹೊರ ಹಾಕಲು ಪ್ರಯತ್ನಿಸುತ್ತಿರುವ ವೇಳೆ ಮೃತಪಟ್ಟಿದ್ದಾರೆ. ದಿಲ್ಸುಖ್‌ನಗರದ ಕಟ್ಟಡವೊಂದರ ನೆಲ ಮಾಳಿಗೆಯಲ್ಲಿದ್ದ ಮೂರು ವರ್ಷದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ನಾಗಕರ್ನೂಲ್ ಜಿಲ್ಲೆಯಲ್ಲಿ ಮನೆ ಕುಸಿದ ಘಟನೆಯಲ್ಲಿ 3 ಮಂದಿ ಮೃತಪಟ್ಟಿದ್ದಾರೆ.
ಯಾದಾದ್ರಿ-ಭೋಂಗೀರ್ ಜಿಲ್ಲೆಯಲ್ಲಿ 11 ವರ್ಷದ ಬಾಲಕ ಸೇರಿದಂತೆ ಮೂವರು ಕೊಚ್ಚಿ ಹೋಗಿದ್ದಾರೆ. ಕೊಥಗುಡೆಮ್ ಮತ್ತು ಪೋಚಂಪಲ್ಲಿ ನಡುವೆ ತುಂಬಿ ಹರಿಯುವ ಹೊಳೆಯಲ್ಲಿ ಸಿಲುಕಿದ್ದ ಸರ್ಕಾರಿ ಸ್ವಾಮ್ಯದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್‌ಆರ್‌ಟಿಸಿ) ಬಸ್‌ನ ಪ್ರಯಾಣಿಕರನ್ನು ರಕ್ಷಿಸುವ ವೇಳೆ ಇಬ್ಬರು ಮಹಿಳೆಯರು ಕೊಚ್ಚಿಕೊಂಡು ಹೋಗಿದ್ದಾರೆ. ಅಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ವನಪಾರ್ತಿ ಜಿಲ್ಲೆಯ ಮಾಶಮ್ಮ ವಾಗು ಎಂಬಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.