ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆ ತಮ್ಮ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ವೈದ್ಯರ ದಿನದ ಅಂಗವಾಗಿ ರಾಹುಲ್ ಗಾಂಧಿ ಶುಭಾಶಯ ಕೋರಿದ್ದಾರೆ. ವಿಡಿಯೋ ಸಂವಾದದ ಮೂಲಕ ದಾದಿಯರ ಸಮಸ್ಯೆಗಳನ್ನು ಆಲಿಸಿ, ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಮುಂಚೂಣಿ ಹೋರಾಟಗಾರರಾಗಿ ಕಾರ್ಯನಿರ್ವಹಿಸುತ್ತಿರುವ ದಾದಿಯರಿಗೆ ಸರ್ಕಾರ ಸಕಲ ಸೌಲಭ್ಯಗಳನ್ನು ನೀಡಬೇಕು ಎಂದ ರಾಹುಲ್ ಗಾಂಧಿ, ದಾದಿಯರು ಕರ್ತವ್ಯ ನಿರ್ವಹಿಸುವಾಗ ನಿಧನರಾದ್ರೆ ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಈ ನಿಟ್ಟಿನಲ್ಲಿ ಅವರ ಪರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.
ಇಂದು ಬೆಳಗ್ಗೆ ದಾದಿಯರು ಹಾಗೂ ಮಾಜಿ ಕಾಂಗ್ರೆಸ್ ಮುಖ್ಯಸ್ಥ ವಿಪಿನ್ ಕೃಷ್ಣನ್ ಅವರೊಂದಿಗೆ ರಾಹುಲ್ ಗಾಂಧಿ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ದೆಹಲಿಯ ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಮಾತನಾಡಿ, ರಾಷ್ಟ್ರ ರಾಜಧಾನಿಯಲ್ಲಿ ಇಬ್ಬರು ದಾದಿಯರು ಸಾವನ್ನಪ್ಪಿದ್ದಾರೆ. ಅವರು ದಕ್ಷಿಣ ಭಾರತದಿಂದ ಬಂದವರು. ಆದಾಗ್ಯೂ, ದೆಹಲಿ ಸರ್ಕಾರ ಘೋಷಿಸಿದ ಒಂದು ಕೋಟಿ ರೂ.ಗಳ ಪರಿಹಾರದ ಹಣ ಈವರೆಗೂ ಅವರ ಕುಟುಂಬಸ್ಥರ ಕೈ ಸೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಏಮ್ಸ್ ಸಿಬ್ಬಂದಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಈ ಬಗ್ಗೆ ದೆಹಲಿ ಸರ್ಕಾರಕ್ಕೆ ನಾನು ಪತ್ರ ಬರೆಯುತ್ತೇನೆ ಹಾಗೂ ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದರು. ದೆಹಲಿ ಮತ್ತು ಭಾರತದಲ್ಲಿನ ವೈದ್ಯಕೀಯ ಸೌಲಭ್ಯಗಳ ಸ್ಥಿತಿಯ ಬಗ್ಗೆ ರಾಹುಲ್ ಗಾಂಧಿ ಕೃಷ್ಣನ್ ಅವರನ್ನು ಪ್ರಶ್ನಿಸಿದ್ದು, ಭಾರತದಲ್ಲಿ 1.2 ಮಿಲಿಯನ್ ನೋಂದಾಯಿತ ಅಲೋಪತಿ ವೈದ್ಯರಿದ್ದಾರೆ. ಭಾರತದಲ್ಲಿ ಸುಮಾರು 3.7 ಮಿಲಿಯನ್ ನೋಂದಾಯಿತ ದಾದಿಯರನ್ನು ಹೊಂದಿದ್ದೇವೆ ಎಂದು ಕೃಷ್ಣನ್ ಉತ್ತರಿಸಿದರು.
ಮಾನವ ಸಂಪನ್ಮೂಲಗಳ ಕೊರತೆ ತೀವ್ರವಾಗಿರುವ ಹಿನ್ನೆಲೆ, ಕರ್ತವ್ಯದಲ್ಲಿ ಇರುವಂತಹ ದಾದಿಯರೇ ತೀವ್ರವಾಗಿ ಹೋರಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ರೋಗದಿಂದಾಗಿ ದೇಶದ ಚಿತ್ರಣವೇ ಸಂಪೂರ್ಣ ಭಿನ್ನವಾಗಿದೆ. ಭಾರತದ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ವ್ಯತ್ಯಾಸ ಸಮುದ್ರದಷ್ಟಿದೆ ಎಂದು ಕೃಷ್ಣನ್, ರಾಹುಲ್ ಗಾಂಧಿಗೆ ವಿವರಣೆ ನೀಡಿದರು.
ಈ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಯಿಸಿದ್ದು, ಈ ಎಲ್ಲಾ ವ್ಯತ್ಯಾಸವನ್ನು ಗಮನಿಸುತ್ತೇನೆ. ಖಾಸಗಿ ವಲಯ ಮತ್ತು ಸರ್ಕಾರದ ವಲಯದಲ್ಲಿ ಸಾಕಷ್ಟು ತಾರತಮ್ಯವಿದೆ. ಖಾಸಗಿ ದಾದಿಯರಿಗೆ ಅವರ ಸಂಬಳ ಕಡಿತಗೊಳಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಈ ಸಾಂಕ್ರಾಮಿಕ ರೋಗದ ಮಧ್ಯೆ ಅವರು ತಮ್ಮ ಕುಟುಂಬವನ್ನು ನೋಡಿಕೊಳ್ಳುವುದು ಕಷ್ಟ. ಆದ್ದರಿಂದ ಸರ್ಕಾರ ಅವರಿಗೆ ಸಹಾಯ ಮಾಡಬೇಕು ಮತ್ತು ಅವರ ಸಂಪೂರ್ಣ ಸಂಬಳ ಪಾವತಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.