ಜಮ್ಮು ಮತ್ತು ಕಾಶ್ಮೀರ: ಒಂದಾನೊಂದು ಕಾಲದಲ್ಲಿ ಬಹುತೇಕ ಜನರ ಒಡನಾಡಿಯಾಗಿದ್ದ ರೇಡಿಯೋ, ಟಿವಿ, ಮೊಬೈಲ್ ಫೋನ್, 3ಜಿ, 4ಜಿ ತಂತ್ರಜ್ಞಾನಗಳು ಬಂದ ನಂತರ ಬಹುತೇಕ ಮೂಲೆ ಗುಂಪಾಗಿದ್ದವು. ಆದರೀಗ ಕಾಶ್ಮೀರ ಜನರ ಪಾಲಿಗೆ ಅದೇ ಸರ್ವಸ್ವ ಎಂಬಂತಾಗಿದೆ.
ಹೌದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ಯನ್ನು ಆಗಸ್ಟ್ 5ರಂದು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಭದ್ರತೆಯ ಕಾರಣಕ್ಕೆ ಕಣಿವೆ ನಾಡಲ್ಲಿ ಬಹುತೇಕ ಎಲ್ಲಾ ಸಂಪರ್ಕ ಸಾಧನಗಳನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಜನ ಸುದ್ದಿ ಹಾಗೂ ಮಾಹಿತಿಗಾಗಿ ರೇಡಿಯೋದ ಮೊರೆ ಹೋಗಿದ್ದಾರೆ.
ಜಮ್ಮು ಕಾಶ್ಮೀರದ ಸದ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಲು ಹಾಗೂ ಕಣಿವೆ ನಾಡಿನಿಂದ ದೂರ ಬಂದಿರುವ ಅವರ ಆತ್ಮೀಯರ ಜೊತೆ ಸಂಪರ್ಕದಲ್ಲಿರಲು ಕಾಶ್ಮೀರದ ಜನರಿಗೆ ರೇಡಿಯೋ ಕಾಶ್ಮೀರ್ ಹಾಗೂ ಅಲ್ ಇಂಡಿಯಾ ರೆಡಿಯೋ ಸಹಾಯ ಮಾಡಿದೆ.
ಈ ಬಗ್ಗೆ ಮಾತನಾಡಿದ ಕಾಶ್ಮೀರದ ಯುವಕರೊಬ್ಬರು, ಆಗಸ್ಟ್ 5 ರಂದು ಬೆಳಗ್ಗೆದ್ದು ನಾವು ಟಿವಿ ಹಾಕಿದಾಗ ಕೇಬಲ್ ನೆಟ್ವರ್ಕ್ ಇರಲಿಲ್ಲ. ಲೋಕಸಭಾ ಟಿವಿ ಹಾಗೂ ರಾಜ್ಯ ಸಭಾ ಟಿವಿ ಹೊರತುಪಡಿಸಿ ಎಲ್ಲಾ ಚಾನೆಲ್ಗಳು ರದ್ದಾಗಿದ್ದವು. ಹೀಗಾಗಿ ಸುದ್ದಿಗಾಗಿ ನಾವು ಮನೆಯ ಮೂಲೆಯೊಂದರಲ್ಲಿ ಬಳಕೆ ಮಾಡದೇ ಇರಿಸಿದ್ದ ರೇಡಿಯೋದ ಮೊರೆ ಹೋದೆವು. ಒಂದು ಕಡೆ ದೇಶ ಡಿಜಿಟಲ್ ಇಂಡಿಯಾ ಹೆಸರಲ್ಲಿ ಮುನ್ನುಗುತ್ತಿದೆ. ಆದರೆ ಇಲ್ಲಿ ನಾವು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ಬಳಲುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಶ್ರೀನಗರದಲ್ಲಿರುವ ರೇಡಿಯೋ ಕಾಶ್ಮೀರ್ ಆಕಾಶವಾಣಿ ಕೇಂದ್ರವು ಮಧ್ಯಮ ತರಂಗಾಂತರದಲ್ಲಿ ಜಮ್ಮು ಮತ್ತು ಕಾಶ್ಮೀರ ಎರಡೂ ವಿಭಾಗಗಳನ್ನು ತಲುಪುತ್ತದೆ. ಈ ಕೇಂದ್ರವೂ ಪ್ರಸ್ತುತ ಫೋನ್ ಇನ್ ಕಾರ್ಯಕ್ರಮ ನಡೆಸಿ ರಾಜ್ಯದಿಂದ ಹೊರಗಿರುವ ಕಾಶ್ಮೀರಿಗಳ ಅನುಭವ ಹಂಚಿಕೊಳ್ಳಲು ಅವಕಾಶ ನೀಡುತ್ತಿದೆ.
ಅಲ್ಲದೇ ಪ್ರಮುಖ ಭಾಷಣಗಳು, ಘೋಷಣೆಗಳು, ಜಮ್ಮು ಮತ್ತು ಕಾಶ್ಮೀರದ ಮರು ಸಂಘಟನೆಯ ಕುರಿತಾಗಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣ ಮುಂತಾದವುಗಳನ್ನುಕಾಶ್ಮೀರದಲ್ಲಿರುವ ಸ್ಥಳೀಯ ಭಾಷೆಗಳಾದ ಕಾಶ್ಮೀರಿ, ಗೊಜ್ರಿ, ಡೊರ್ಗಿ ಹಾಗೂ ಬೊಟಿ ಭಾಷೆಗಳಿಗೆ ಭಾಷಾಂತರಿಸಿ ಪ್ರಸಾರ ಮಾಡುತ್ತಿದೆ. ಒಟ್ಟಿನಲ್ಲಿ ಆಧುನಿಕತೆಯ ಭರಾಟೆಗೆ ಸಿಲುಕಿ ಮೂಲೆಗುಂಪಾಗಿದ ರೇಡಿಯೋಗೂ ಈಗ ಕಾಶ್ಮೀರದಲ್ಲಿ ಬೆಲೆ ಬಂದಿದೆ ಅಂದ್ರೆ ತಪ್ಪಾಗಲಾರದು.