ಚಂಡೀಗಢ (ಪಂಜಾಬ್): ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರೋಧಿಸಿ ಪಂಜಾಬ್ ಸರ್ಕಾರ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಗಳನ್ನು ಮಂಡಿಸಿದೆ.
ವಿಧಾನಸಭಾ ಅಧಿವೇಶನದ ಎರಡನೇ ದಿನವಾದ ಇಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೇಂದ್ರದ ಕೃಷಿ ನೀತಿಗಳಿಗೆ ವಿರೋಧವಾಗಿ ಮೂರು ಮಸೂದೆಗಳನ್ನು ಮಂಡಿಸಿದ್ದಾರೆ. ಅವು ಯಾವುವೆಂದರೆ,
1. ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ ಮಸೂದೆ- 2020
2. ಅಗತ್ಯ ಸರಕುಗಳು (ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ) ಮಸೂದೆ - 2020
3. ರೈತರಿಗೆ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದದ (ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ) ಮಸೂದೆ- 2020
ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿದ್ದ ನೂತನ ಕೃಷಿ ಕಾಯ್ದೆಗಳು ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ಕಾಯ್ದೆಗಳಾಗಿವೆ. ಇವು ದೇಶದ ಆಹಾರ ಭದ್ರತಾ ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತವೆ ಎಂದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿ ಇದರ ವಿರುದ್ಧ ಟೀಕೆ, ವಿರೋಧಗಳು ವ್ಯಕ್ತವಾಗಿತ್ತು. ಶಿರೋಮಣಿ ಅಕಾಲಿ ದಳದ (SAD) ನಾಯಕರೂ ಸೇರಿದಂತೆ ಪಂಜಾಬ್ನಲ್ಲಿ ಇದರ ವಿರುದ್ಧ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು.