ಛಂಡೀಗಢ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹಿತದೃಷ್ಟಿಯಿಂದ ಪಂಜಾಬ್ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ವಿಜಯ್ ಇಂದರ್ ಸಿಂಗ್ಲಾ ಅವರು ತಮ್ಮ ಒಂದು ತಿಂಗಳ ವೇತನ ನೀಡುವುದಾಗಿ ಘೋಷಿಸಿದ್ದಾರೆ.
ಇದು ಸಾಮಾನ್ಯವಾದ ಸಮಯವಲ್ಲ. ನಮ್ಮ ರೈತರಿಗೆ ಸಹಾಯ ಮಾಡಲು ಎಲ್ಲ ಭಾಗಗಳಿಂದಲ್ಲೂ ಸಾಕಷ್ಟು ನೆರವು ನೀಡುವ ಅಗತ್ಯವಿದೆ. ಅವರ ಬೇಡಿಕೆಗಳಿಗೆ ಒಗ್ಗಟ್ಟಿನಿಂದ ನಿಂತುಕೊಳ್ಳಲು ನನ್ನ ಒಂದು ತಿಂಗಳ ಸಂಬಳವನ್ನು ಅವರ ಹೋರಾಟದ ಉದ್ದೇಶಕ್ಕಾಗಿ ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮುಗಿಯದ ಮಾತುಕತೆ, ನಿಲ್ಲದ ಪ್ರತಿಭಟನೆ: ಡಿ.9ಕ್ಕೆ ಮತ್ತೊಂದು ಸುತ್ತಿನ ಸಂಧಾನ
ನಮ್ಮ ರೈತರನ್ನು ಸಬಲೀಕರಣಗೊಳಿಸಲು ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯ ಚುನಾವಣೆ ಪ್ರಣಾಳಿಕೆ ನೆನಪಿಸಿದ ಸಚಿವರು, ಬಿಜೆಪಿಯು ಚುನಾವಣಾ ಪ್ರಣಾಳಿಕೆಯಲ್ಲಿ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದೆ. ಈ ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿವೆ. ಇಂತಹ ಕಾಯ್ದೆಗಳು ಜಾರಿಗೆ ತಂದಾಗ ಆದಾಯ ದ್ವಿಗುಣ ಸಾಧಿಸಲು ಸಾಧ್ಯವಿಲ್ಲ ಎಂದರು.