ತಿರುವನಂತಪುರ( ಕೇರಳ): ಇಲ್ಲಿನ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಕೇರಳ ಸರ್ಕಾರ ಅಸಮಾಧಾನಗೊಂಡಿದೆ. ಸಾರ್ವಜನಿಕ - ಖಾಸಗಿ ಸಹಭಾಗಿತ್ವ(ಪಿಪಿಪಿ) ಮೂಲಕ ಗುತ್ತಿಗೆ ನೀಡಲು ಕ್ಯಾಬಿನೆಟ್ ನಿರ್ಧರಿಸಿದ್ದು, ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದೆ.
ಹೊರಗುತ್ತಿಗೆ ಮೂಲಕ ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ವಹಿಸಲು ನಿರ್ಧರಿಸಿರುವುದು ಕಾನೂನು ಬಾಹಿರ ಎಂದು ಕೋರ್ಟ್ಗೆ ತಿಳಿಸಲಿದೆ. ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಹಕರಿಸಲು ಕಷ್ಟವಾಗಲಿದೆ, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪ್ರಧಾನಿಯವರಲ್ಲಿ ಒತ್ತಾಯಿಸಿದ್ದಾರೆ.
ಅಲ್ಲದೆ ಕೇಂದ್ರದ ನಿರ್ಧಾರವನ್ನು ರಾಜ್ಯದ ಸಂಪುಟದಲ್ಲಿ ನಿರಾಕರಿಸುತ್ತಲೇ ಬಂದಿದ್ದೇವೆ. ವಿಮಾನ ನಿಲ್ದಾಣದ ಆಡಳಿತವನ್ನು ರಾಜ್ಯ ಸರ್ಕಾರ ಹೆಚ್ಚು ಹೂಡಿಕೆ ಮಾಡಿರುವ ಕಂಪನಿಗೆ ನೀಡುವಂತೆಯೂ ಮನವಿ ಮಾಡಿಕೊಳ್ಳುತ್ತ ಬಂದಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ ವಿಮಾನ ನಿಲ್ದಾಣವನ್ನು ಗುತ್ತಿಗೆ ನೀಡುವ ನಿರ್ಧಾರವು ಕೇಂದ್ರ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯವು 2003ರಲ್ಲಿ ನೀಡಿರುವ ಆಶ್ವಾಸನೆಗೆ ವಿರುದ್ಧವಾಗಿದೆ. ಅಲ್ಲದೇ ಇದೇ ಆಶ್ವಾಸನೆಯನ್ನು ಪ್ರಧಾನಿ ನರೇಂದ್ರ ಮೋದಿ ಸಹ ನೀಡಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.