ವಾರಣಾಸಿ: ವಿದ್ಯುತ್ ತಗುಲಿ ಶಾಕ್ ಹೊಡೆಯುವುದು ಸಹಜ. ಆದರೆ ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಶಾಲೆಯ ಸಿಬ್ಬಂದಿ ತಮ್ಮ ಶಾಲೆಗೆ ಬಂದಿರುವ ವಿದ್ಯುತ್ ಬಿಲ್ ನೋಡಿಯೇ ಶಾಕ್‌ಗೊಳಗಾಗಿದ್ದಾರೆ.
ವಾರಣಾಸಿಯ ಖಾಸಗಿ ಶಾಲೆಗೆ ಬರೋಬ್ಬರಿ 618.50 ಕೋಟಿ ರೂ ವಿದ್ಯುತ್ ಬಿಲ್ ಬಂದಿದೆ. ಇದನ್ನು ನೋಡಿ ಶಾಲಾ ಮ್ಯಾನೆಜ್ಮೆಂಟ್ ಮಂಡಳಿ ಶಾಕ್ಗೊಳಗಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಾಲೆಯ ಸಂಯೋಜಕ ಯೋಗೇಂದ್ರ ಮಿಶ್ರಾ, ಬಿಲ್ ವಿಚಾರವಾಗಿ ಈಗಾಗಲೇ ಅನೇಕ ಸಲ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಟೆಕ್ನಿಕಲ್ ತೊಂದರೆಯಿಂದಾಗಿ ಈ ಬಿಲ್ ಬಂದಿರಬಹುದು ಎಂದು ನಾವು ಹೇಳಿದ್ದೇವೆ. ಆದರೂ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ಹಣ ತುಂಬದಿದ್ದರೆ ನಿಮ್ಮ ಶಾಲೆಗಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರಂತೆ. ಇಷ್ಟೊಂದು ಹಣ ನಾವು ಎಲ್ಲಿಂದ ತುಂಬುವುದು ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.