ಲಡಾಖ್: ಪ್ರಧಾನಿ ನರೇಂದ್ರ ಮೋದಿ ಇಂದು ಲಡಾಖ್ನ ಲೇಹ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಯೋಧರನ್ನುದ್ದೇಶಿಸಿ ಮಾತನಾಡಿದ್ದು, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಇದಾದ ಬಳಿಕ ಜೂನ್ 15ರಂದು ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಭಾರತ-ಚೀನಾ ಯೋಧರ ನಡುವಿನ ಹಿಂಸಾತ್ಮಕ ಸಂಘರ್ಷದಲ್ಲಿ ಗಾಯಗೊಂಡಿದ್ದ ಯೋಧರ ಭೇಟಿ ಮಾಡಿ ಧೈರ್ಯ ತುಂಬಿದರು. ನಮ್ಮ ದೇಶ ಎಂದಿಗೂ ತಲೆಬಾಗಲಿಲ್ಲ.ಯಾವುದೇ ವಿಶ್ವಶಕ್ತಿಗೆ ತಲೆಬಾಗುವುದಿಲ್ಲ. ನಿಮ್ಮಂತಹ ಧೈರ್ಯಶಾಲಿಗಳ ಕಾರಣದಿಂದ ನಾನು ಇದನ್ನ ಹೇಳಲು ಸಮರ್ಥನಾಗಿದ್ದೇನೆ ಎಂದರು.
ಗಡಿಯಲ್ಲಿ ನೀವೂ ತೋರಿಸಿದ ಶೌರ್ಯದ ಸಂದೇಶ ಇದೀಗ ಜಗತ್ತಿಗೆ ಗೊತ್ತಾಗಿದೆ. ಈ ಧೈರ್ಯಶಾಲಿಗಳು ಯಾರು ಎಂಬುದನ್ನ ತಿಳಿಯಲು ಇಡೀ ಜಗತ್ತು ಬಯಸುತ್ತದೆ. ಅವರ ತರಬೇತಿ ಏನು? ಅವರ ತ್ಯಾಗ ಏನು? ನಿಮ್ಮ ಶೌರ್ಯವನ್ನ ಜಗತ್ತು ವಿಶ್ಲೇಷಿಸುತ್ತಿದೆ ಎಂದಿರುವ ನಮೋ, ನೀವೆಲ್ಲರೂ ಸೂಕ್ತವಾದ ತಿರುಗೇಟು ನೀಡಿದ್ದೀರಿ. ನಿಮ್ಮ ಧೈರ್ಯ, ಚೆಲ್ಲುವ ರಕ್ತ ನಮ್ಮ ಯುವಕರು, ದೇಶವಾಸಿಗಳು ಹಾಗೂ ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ. ನಿವೆಲ್ಲರೂ ಆದಷ್ಟು ಬೇಗ ಚೇತರಿಸಿಕೊಂಡು, ದೇಶ ಸೇವೆಯಲ್ಲಿ ಮತ್ತೊಮ್ಮೆ ನಿರಂತರಾಗಿ ಎಂದು ನಮೋ ಇದೇ ವೇಳೆ ಯೋಧರಿಗೆ ಹುರುದುಂಬಿಸಿದರು.