ಮಿರ್ಜಾಪುರ್(ಯುಪಿ): ಶಾಲಾ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ ಸಿಗಲೆಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭಿಸಿ ಅನೇಕ ವರ್ಷಗಳೇ ಕಳೆದು ಹೋಗಿವೆ. ಇದರ ಮಧ್ಯೆ ಕೆಲವೊಂದು ಕಡೆ ಮಕ್ಕಳಿಗೆ ನೀಡುವ ಆಹಾರ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತದೆ.
ಉತ್ತರಪ್ರದೇಶದ ಮಿರ್ಜಾಪುರ್ನಲ್ಲಿನ ಹಿನೌಟಾ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ರೂಪದಲ್ಲಿ ರೊಟ್ಟಿ ನೀಡಲಾಗುತ್ತಿದ್ದು, ಅದಕ್ಕೆ ಹಚ್ಚಿಕೊಳ್ಳಲು ಉಪ್ಪು ನೀಡಲಾಗಿದೆ. ಅದನ್ನೇ ಮಕ್ಕಳು ಸೇವನೆ ಮಾಡುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ,ಅನುರಾಗ್ ಪಟೇಲ್, ಶಿಕ್ಷಕರು ಹಾಗೂ ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಈಗಾಗಲೇ ನಾವು ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದ್ದು, ಮೆಲ್ವಿಚಾರಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.