ನವದೆಹಲಿ: ಕುಷ್ಠರೋಗ ನಿರ್ಮೂಲನೆಗೆ ಹೋರಾಡಿದಕ್ಕಾಗಿ ಡಾ.ಎನ್.ಎಸ್.ಧರ್ಮಶಕ್ತು ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 2019ನೇ ಸಾಲಿನ 'ಅಂತಾರಾಷ್ಟ್ರೀಯ ಗಾಂಧಿ ಪ್ರಶಸ್ತಿ' ನೀಡಿ ಗೌರವಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಾಮ್ ನಾಥ್ ಕೋವಿಂದ್, ಕೆಲವು ವರ್ಷಗಳಿಂದ ಕುಷ್ಠರೋಗದ ವಿರುದ್ಧದ ನಮ್ಮ ಹೋರಾಟದಲ್ಲಿ, ನಾವು ಸಾಕಷ್ಟು ಸಾಧಿಸಿದ್ದೇವೆ. 10 ಸಾವಿರ ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಕುಷ್ಠರೋಗ ಪ್ರಕರಣವಿದ್ದು, ಕುಷ್ಠರೋಗ ನಿರ್ಮೂಲನೆಯನ್ನು ನಾವು ಯಶಸ್ವಿಯಾಗಿ ಸಾಧಿಸಿದ್ದೇವೆ. ಕುಷ್ಠರೋಗ ಪ್ರಕರಣಗಳನ್ನು ಮೊದಲೇ ಪತ್ತೆಹಚ್ಚುವತ್ತ ನಾವು ಹೆಚ್ಚು ಪ್ರಯತ್ನಗಳನ್ನು ಮಾಡಿ, ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದರು.
ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ, ಅಥವಾ ರಾಜಕೀಯ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಹೆಸರಿನಲ್ಲಿ ಭಾರತ ಸರ್ಕಾರ 'ಗಾಂಧಿ ಶಾಂತಿ ಪ್ರಶಸ್ತಿ' ಅಥವಾ 'ಅಂತಾರಾಷ್ಟ್ರೀಯ ಗಾಂಧಿ ಪ್ರಶಸ್ತಿ' ನೀಡುತ್ತದೆ.
1995 ರಲ್ಲಿ ಗಾಂಧೀಜಿಯ 125 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಲು ಭಾರತ ಸರ್ಕಾರ ಪ್ರಾರಂಭಿಸಿದ್ದು, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಡೆಸ್ಮಂಡ್ ಟುಟು, ಭಾರತದ ರಾಮಕೃಷ್ಣ ಮಿಷನ್, ಭಾರತೀಯ ವಿದ್ಯಾ ಭವನ್, ಇಸ್ರೋ ಸಂಸ್ಥೆ ಸೇರಿ ವಿವಿಧ ದೇಶಗಳ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗಿದೆ. 2018 ರ ಪ್ರಶಸ್ತಿ ಜಪಾನ್ನ ಯೋಹೆ ಸಸಕಾವಾರಿಗೆ ನೀಡಿ ಗೌರವಿಸಲಾಗಿದ್ದು, 2019ನೇ ಸಾಲಿನ ಪ್ರಶಸ್ತಿಗೆ ಕುಷ್ಠರೋಗದ ವಿರುದ್ಧ ಹೋರಾಡಿರುವ ಡಾ.ಎನ್.ಎಸ್.ಧರ್ಮಶಕ್ತು ಅವರು ಭಾಜನರಾಗಿದ್ದಾರೆ.