ಕಣ್ಣೂರು (ಕೇರಳ): ಗರ್ಭಿಣಿಗೆ ಸಿ - ಸೆಕ್ಷನ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ವಿಶೇಷ ಎಂದರೆ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಿ ಗರ್ಭಿಣಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಧ್ಯೆ ಅಪಾಯದ ನಡುವೆಯೂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡ ಶನಿವಾರ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಇತಿಹಾಸ ಬರೆದಿದೆ.
ಕಾಸರಗೋಡು ಮೂಲದ ಮಹಿಳೆ ಕೊರೊನಾ ವೈರಸ್ ನಿಂದ ಬಳಲುತ್ತಿದ್ದರು. ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂಬುದು ದೃಢ ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಗರ್ಭಿಣಿಯನ್ನ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ಗರ್ಭಿಣಿಯಾಗಿದ್ದರಿಂದ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ವೈದ್ಯರು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಧರಿಸಿ ಸುರಕ್ಷಿತ ಹೆರಿಗೆ ಮಾಡಿಸಿ ಮಗುವಿನ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ಕೊರೊನಾ ಸೋಂಕಿತ ಮಹಿಳೆಯ ಯಶಸ್ವಿ ಹೆರಿಗೆ ಬಳಿಕ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಎನ್ ರಾಯ್, ತಾಯಿ ಮತ್ತು ಮಗು ಇಬ್ಬರೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೆರಿಗೆ ಮಾಡುವಾಗ ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ.
ಇನ್ನು ಮಹಿಳೆಯನ್ನು ಪ್ರತ್ಯೇಕವಾಗಿ ಇರಿಸಲಾಗುವುದು. ಮಗುವನ್ನು ಕೆಲವು ದಿನಗಳವರೆಗೆ ತಾಯಿಯಿಂದ ದೂರವಿಡಲಾಗುತ್ತದೆ. ನಂತರ ಆಕೆ ಸ್ತನ್ಯಪಾನವನ್ನು ಪ್ರಾರಂಭಿಸಬಹುದು ಎಂದು ಅವರು ಹೇಳಿದರು.
ಕೇರಳದಲ್ಲಿ ಈವರೆಗೆ ಒಟ್ಟು 364 ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಪ್ರಸ್ತುತ 238 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.