ಅಲ್ವಾರ್: ಎನ್‌ಆರ್‌ಸಿ ಮತ್ತು ಸಿಎಎ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಮೋದಿ ಸರ್ಕಾರ ಅಂಬೇಡ್ಕರ್, ಗಾಂಧೀಜಿಯಂತಹ ಮಹನೀಯರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಡಾ. ಭೀಮ್ರಾವ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಆರೋಪಿಸಿದ್ದಾರೆ.
ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿಸಿ ದೇಶಾದ್ಯಂತ ನಿರಂತರ ಪ್ರತಿಭಟನೆ, ಹೋರಾಟ, ಸತ್ಯಾಗ್ರಹ ಮುಂದುವರೆದಿವೆ. ಹೀಗೆ ಅಲ್ವಾರ್ನ ಕಾರ್ಬಾಲಾ ಮೈದಾನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಭಾಗವಹಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕಿಡಿಕಾರಿದರು.
ಮಾಧ್ಯಮದವರೊಂದಿಗೆ ಪ್ರಕಾಶ್ ಅಂಬೇಡ್ಕರ್ ಮಾತನಾಡಿ, ಭಾರತದಲ್ಲಿ ಜನಿಸಿದವರು ಭಾರತೀಯರು. ಅದಕ್ಕೆ ಯಾವುದೇ ಪುರಾವೆ ಬೇಡ. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರ ನಿಯಮಗಳನ್ನು ಬದಲಾಯಿಸುವ ಪ್ರಯತ್ನದಲ್ಲಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಜನರ ಮನಸ್ಸಿನಲ್ಲಿ ಗೌರವವಿದೆ. ಆ ಕಾರಣದಿಂದಾಗಿಯೇ ಮೋದಿ ಸರ್ಕಾರ ಆ ಗಣ್ಯರ ಹೆಸರಿನಿಂದ ಜನರನ್ನು ನಿರಂತರವಾಗಿ ಗೊಂದಲಗೊಳಿಸುತ್ತಿದೆ ಎಂದು ಕಿಡಿಕಾರಿದರು.
ಹದಗೆಟ್ಟ ಆರ್ಥಿಕ ಸ್ಥಿತಿಯಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಸರ್ಕಾರವು ಏಪ್ರಿಲ್ 1 ರಿಂದ ವಿಶೇಷ ಸಮೀಕ್ಷೆ ಪ್ರಾರಂಭಿಸುತ್ತಿದೆ. ಈ ಸರ್ಕಾರ ಮನುವಾದಿ ಸರ್ಕಾರ, ತನ್ನ ಆಲೋಚನೆಯನ್ನು ಇತರರ ಮೇಲೆ ಹೇರುವಲ್ಲಿ ನಿರತವಾಗಿದೆಯೇ ಹೊರತು ಅಭಿವೃದ್ಧಿಯಲ್ಲ. ಹಾಗಾಗಿ ಜನರು ಸುದೀರ್ಘ ಯುದ್ಧ ಮಾಡಬೇಕಾಗಿದೆ ಎಂದರು.