ತ್ರಿಶೂರ್: 'ಜನರೊಂದಿಗೆ ಪೊಲೀಸರು' (Police with the people) ಅಭಿಯಾನದಡಿ ಕೇರಳ ಪೊಲೀಸರು ಕ್ವಾರಂಟೈನ್ನಲ್ಲಿರುವವರಿಗೆ ವಿಡಿಯೋ ಕಾಲ್ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಆ ಮೂಲಕ ಅವರಿಗೆ ಮನೋಸ್ಥೈರ್ಯ ತುಂಬಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ತ್ರಿಶೂರ್ ರೇಂಜ್ ಡಿಐಜಿ ಎಸ್ ಸುರೇಂದ್ರನ್ ಅವರು, ಮನೆಯಲ್ಲಿ ಕ್ವಾರಂಟೈನ್ನಲ್ಲಿರುವವರಿಗೆ ವಿಡಿಯೋ ಕಾಲ್ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಕೊರೊನಾ ವೈರಸ್ ಹೋಗಲಾಡಿಸುವ ಪ್ರಯತ್ನದಲ್ಲಿ ಜನರ ಸಹಭಾಗಿತ್ವವವನ್ನೂ ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. 'ಕ್ವಾರಂಟೈನ್ನಲ್ಲಿರುವವರು ತಮ್ಮ ಕುಟುಂಬ ಸದಸ್ಯರೊಂದಿಗೂ ಮಾತನಾಡುವಂತಿಲ್ಲ. ಇದರಿಂದಾಗಿ ಅವರ ಮನೋಸ್ಥೈರ್ಯ ಕುಸಿಯುವ ಸಾಧ್ಯತೆಗಳಿರುತ್ತವೆ.
ಹೀಗಾಗಿ ಅವರ ಒತ್ತಡ ಹಾಗೂ ಉದ್ವೇಗಗಳನ್ನು ನಿವಾರಿಸಿ, ಅವರಲ್ಲಿ ಧೈರ್ಯ ತುಂಬಲು ಕೇರಳ ಪೊಲೀಸರು ವಿಡಿಯೋ ಕಾಲ್ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದಾರೆ.' ಎಂದು ಡಿಐಜಿ ಸುರೇಂದ್ರನ್ ತಿಳಿಸಿದರು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೇರಳ ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.