ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನನ್ನ ತಂದೆಯೊಂದಿಗೆ ಮಾತನಾಡಿ ನಾನು ಅವರ ಸಂಪುಟದ ಭಾಗವಾಗುವ ಕುರಿತು ಸಲಹೆಯನ್ನ ನೀಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಇದು ಪ್ರಧಾನಿ ಮೋದಿಯವರ ಉದಾರತೆ ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದೆ ಸುಪ್ರಿಯಾ ಸುಳೆ ಹೇಳಿದರು.
ಮುಂದುವರೆದು ಮಾತನಾಡಿದ ಅವರು, 'ನಾನು ಆ ಚರ್ಚೆಯಲ್ಲಿ ಇರಲಿಲ್ಲ(ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಮೋದಿ ನಡುವೆ). ನನ್ನ ಮೇಲೆ ಅಷ್ಟೊಂದು ನಂಬಿಕೆ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಿದ್ದಕ್ಕಾಗಿ ಪ್ರಧಾನಿಯವರಿಗೆ ನನ್ನ ಹೃದಯಾಂತರಾಳದ ಕೃತಜ್ಞತೆ ಅರ್ಪಿಸುತ್ತೇನೆ. ಆದರೆ, ಇದು ಸಾಧ್ಯವಿಲ್ಲ ಎಂದು ಪವಾರ್ ಸ್ಪಷ್ಟವಾಗಿ, ಬಹಳ ನಯವಾಗಿ ಪ್ರಧಾನಿಗೆ ತಿಳಿಸಿದ್ದಾರೆ ಎಂದರು.
ಮೋದಿ ಸರ್ಕಾರ ಪವಾರ್ರನ್ನು ರಾಷ್ಟ್ರಪತಿಯನ್ನಾಗಿ ಮಾಡಲು ಮುಂದಾಗಿದೆ ಎಂಬ ವಿಚಾರ ತಳ್ಳಿ ಹಾಕಿದ ಶರದ್ ಪವಾರ್:
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಶರದ್ ಪವಾರ್ ಮಾತನಾಡಿ, ಮೋದಿ ಸರ್ಕಾರ ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಮಾಡಲು ಮುಂದಾಗಿದೆ ಎಂಬ ವಿಚಾರಗಳನ್ನು ತಳ್ಳಿಹಾಕಿದ್ದಾರೆ. ಇದೇ ವೇಳೆ, ಮೋದಿ ನೇತೃತ್ವದ ಸಂಪುಟದಲ್ಲಿ ಸುಪ್ರಿಯಾ ಸುಳೆ ಅವರನ್ನು ಮಂತ್ರಿಯನ್ನಾಗಿ ಮಾಡುವ ಪ್ರಸ್ತಾಪವಿತ್ತು ಎಂದು ಅವರು ತಿಳಿಸಿದ್ದಾರೆ.
ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ನಡುವಿನ ಮಾತುಕತೆಯ ನಡುವೆ ಪವಾರ್ ಕಳೆದ ತಿಂಗಳು ಪ್ರಧಾನಿ ಅವರನ್ನು ಭೇಟಿಯಾಗಿದ್ದರು.
ಇನ್ನು ಮಹಾರಾಷ್ಟ್ರ ನೂತನ ಸರ್ಕಾರದಲ್ಲಿ ಅಜಿತ್ ಪವಾರ್ ಅವರ ಪಾತ್ರದ ಬಗ್ಗೆ ಕೇಳಿದಾಗ, ಪವಾರ್ ಎನ್‌ಸಿಪಿ ಹಿರಿಯ ಮುಖಂಡರು, ತಮ್ಮ ಪಕ್ಷದ ನಿರ್ದೇಶನದ ಹೊರತಾಗಿ ಅಜಿತ್ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಅನಂತರ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸದ್ಯ ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಮತ್ತೆ ಪಕ್ಷಕ್ಕೆ ಮರಳಿದ್ದಾರೆ. ಅಜಿತ್ ನಮ್ಮ ನಾಯಕ ಮತ್ತು ನನ್ನ ಹಿರಿಯ ಸಹೋದರ. ಅವರು ಯಾವಾಗಲೂ ಪಕ್ಷದಲ್ಲಿ ನನ್ನ ಹಿರಿಯ ಸಹೋದ್ಯೋಗಿಯಾಗಿರುತ್ತಾರೆ ಎಂದು ಸುಪ್ರಿಯಾ ತಿಳಿಸಿದ್ದಾರೆ.