ರಾಜಸ್ಥಾನ: ಜೈನ ಆಚಾರ್ಯ ವಿಜಯ್ ವಲ್ಲಭ ಸುರಿಶ್ವರ್ ಜೀ ಮಹಾರಾಜ್ ಅವರ 151ನೇ ಜಯಂತ್ಯುತ್ಸವ ಹಿನ್ನೆಲೆ, ಪಾಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಅವರ 151 ಇಂಚು ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಅಷ್ಟಧಾತುನಿಂದ ಮಾಡಿದ ಈ ಪ್ರತಿಮೆಯನ್ನ ರಾಜಸ್ಥಾನದ ಪಾಲಿ ಜಿಲ್ಲೆಯ ಜೆಟ್ಪುರದಲ್ಲಿರುವ ವಿಜಯ್ ವಲ್ಲಭ ಸಾಧನಾ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ. 151 ಇಂಚಿನ (13 ಅಡಿ) ಅಷ್ಟಭುಜಾಕೃತಿಯ ಲೋಹದ ಪ್ರತಿಮೆ ಇದಾಗಿದ್ದು, ನೆಲದಿಂದ 27 ಅಡಿ ಎತ್ತರವಿದೆ. ಇದರ ತೂಕ ಸುಮಾರು 1300 ಕೆಜಿ, ಇದನ್ನು 'ಶಾಂತಿ ಪ್ರತಿಮೆ' (Statue Of Peace) ಎಂದು ಕರೆಯಲಾಗಿದೆ.
ಮಾಹಿತಿಗಳ ಪ್ರಕಾರ, ಜೈನ ಸನ್ಯಾಸಿ ಆಚಾರ್ಯ ವಿಜಯ್ ವಲ್ಲಭ ಸುರಿಶ್ವರ್ ಜೀ ಅವರು 1870 ರಲ್ಲಿ ಗುಜರಾತ್‌ನ ಬರೋಡಾದಲ್ಲಿ ಜನಿಸಿದರು. ಅವರು ಖಾದಿ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ವಕೀಲರಾಗಿದ್ದರು. 1947 ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದಾಗ, ಅವರು ಪಾಕಿಸ್ತಾನದ ಗುಜ್ರಾನ್‌ವಾಲಾದಲ್ಲಿ ಚತುರ್ಮಾಸಗಳನ್ನು ಆಚರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ನಂತರ ಅವರನ್ನು ಕರೆತರಲು ಬ್ರಿಟಿಷ್ ಸರ್ಕಾರ ವಿಶೇಷ ವಿಮಾನವನ್ನು ಕಳುಹಿಸಿತು. ಆದರೆ ಸೆಪ್ಟಂಬರ್ 1947 ರಂದು ಅವರು ತಮ್ಮ 250 ಅನುಯಾಯಿಗಳೊಂದಿಗೆ ಕಾಲ್ನಡಿಗೆಯಲ್ಲಿಯೇ ಭಾರತವನ್ನು ತಲುಪಿದರು.
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ 50 ಸಂಸ್ಥೆಗಳನ್ನು ಸ್ಥಾಪಿಸಿದರು. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಗುಜರಾತ್, ಪಂಜಾಬ್ ಮತ್ತು ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಕೂಡ ಅವರು ನಡೆಸುತ್ತಿದ್ದರು.