ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಚಾಯ್ ಪೇ ಚರ್ಚಾ ಕಾರ್ಯಕ್ರಮ ನಡೆಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಪರೀಕ್ಷಾ ಪೇ ಚರ್ಚಾ ಎಂಬ ಕಾರ್ಯಕ್ರಮ ನಡೆಸಲು ನಮೋ ಮುಂದಾಗಿದ್ದಾರೆ.
ಈಗಾಗಲೇ ನಿಗದಿಯಾಗಿದ್ದ ಪ್ರಕಾರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಜನವರಿ 16ರಂದು ನಡೆಯಬೇಕಾಗಿತ್ತು. ಆದರೆ, ದೇಶದಲ್ಲಿ ಪೊಂಗಲ್, ಮಕರ ಸಂಕ್ರಾತಿ, ಲೋಹ್ರಿ, ಓಣಂ ಹಾಗೂ ವಿವಿಧ ಹಬ್ಬಗಳಿರುವ ಕಾರಣ ಜನವರಿ 16ರ ಬದಲಿಗೆ ಜನವರಿ 20ರಂದು ಈ ಕಾರ್ಯಕ್ರಮ ನಡೆಯಲಿದೆ.
ಈ ವೇಳೆ, ಪ್ರಧಾನಿ ಮೋದಿ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದು, ಪರೀಕ್ಷೆಗಳನ್ನ ಯಾವ ರೀತಿಯಾಗಿ ಎದುರಿಸಬೇಕು ಹಾಗೂ ಯಾವ ರೀತಿಯಲ್ಲಿ ತಯಾರಿ ನಡೆಸಬೇಕು ಎಂಬುದರ ಕುರಿತು ಮೋದಿ ಮಾಹಿತಿ ನೀಡಲಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.