ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶಾದ್ಯಂತ ಜಾರಿಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಆಯೋಜಿಸಲಾಗಿರುವ ಶಿಕ್ಷಾ ಪರ್ವ(ಶಿಕ್ಷಣ ಹಬ್ಬ)ದ ಅಂಗವಾಗಿ ನಡೆಯಲಿರುವ ''21ನೇ ಶತಮಾನದಲ್ಲಿ ಶಾಲಾ ಶಿಕ್ಷಣ'' ಎಂಬ ವಿಚಾರದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
'ಶಿಕ್ಷಣ ಹಬ್ಬ'ದ ಅಂಗವಾಗಿ ಕೇಂದ್ರ ಶಿಕ್ಷಣ ಇಲಾಖೆ ಎರಡು ದಿನಗಳ ''21ನೇ ಶತಮಾನದಲ್ಲಿ ಶಾಲಾ ಶಿಕ್ಷಣ'' ಸಮಾವೇಶವನ್ನು ಆಯೋಜಿಸಿದ್ದು, ಗುರುವಾರದಿಂದ ಈ ಸಮಾವೇಶ ಆರಂಭವಾಗಿದೆ.
ಇನ್ನು ಶಿಕ್ಷಾ ಪರ್ವ ಶಿಕ್ಷಕರನ್ನು ಸನ್ಮಾನಿಸಲು ಮತ್ತು ಹೊಸ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೆಪ್ಟೆಂಬರ್ 8ರಿಂದ 25ರವರಗೆ ಆಯೋಜಿಸಲಾಗಿದೆ. ನೂತನ ಶಿಕ್ಷಣ ನೀತಿಯ ಹಲವಾರು ಅಂಶಗಳ ಕುರಿತು ವಿವಿಧ ವೆಬಿನಾರ್‌ಗಳು, ವಿಡಿಯೋ ಕಾನ್ಫರೆನ್ಸ್ ಸಮ್ಮೇಳನಗಳು ಮತ್ತು ಸಮಾವೇಶಗಳನ್ನು ರಾಷ್ಟ್ರಾದ್ಯಂತ ಆಯೋಜಿಸಲಾಗುತ್ತಿದೆ.
ಇದಕ್ಕೂ ಮೊದಲು ಪ್ರಧಾನಿ ಮೋದಿ 'ಉನ್ನತ ಶಿಕ್ಷಣದಲ್ಲಿನ ಪರಿವರ್ತನಾ ಸುಧಾರಣೆಗಳು' ಸಮಾವೇಶದಲ್ಲಿ ಆಗಸ್ಟ್ 7ರಂದು ಮಾತನಾಡಿದ್ದರು. ಅದಾದ ನಂತರ ಸೆಪ್ಟೆಂಬರ್ 7ರಂದು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ರಾಜ್ಯಪಾಲರ ಸಮಾವೇಶಲ್ಲಿಯೂ ಭಾಷಣ ಮಾಡಿದ್ದರು.
ಈ ಮೂಲಕ ಪ್ರಧಾನಿ ಮೋದಿ ನೂತನ ಶಿಕ್ಷಣ ನೀತಿಯನ್ನು ಉತ್ತೇಜನಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದು, ಹೊಸ ಶಿಕ್ಷಣ ನೀತಿಯ ಜಾರಿಯಿಂದ ಉಂಟಾಗುವ ಕಳವಳಗಳನ್ನು ನಿವಾರಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.
ನೂತನ ಶಿಕ್ಷಣ ನೀತಿ ಎಂಬುದು 21ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದ್ದು, ಇದನ್ನು 1986ರಲ್ಲಿ ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿಯ ನಂತರ 34 ವರ್ಷಗಳ ನಂತರ ಘೋಷಿಸಲಾಗಿದೆ.