ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮತ್ತೆ ವಾಗ್ಬಾಣ ಮುಂದುವರಿಸಿದ್ದಾರೆ. ದೇಶದಲ್ಲಿ ಎಷ್ಟೆಲ್ಲ ಸಮಸ್ಯೆಗಳಿದ್ದರೂ ಆ ಬಗ್ಗೆ ಮಾತಾಡದೆ, ಹಿಮಾಚಲ ಪ್ರದೇಶದ ರೊಹ್ಟಾಂಗ್ನಲ್ಲಿ ಅಟಲ್ ಟನಲ್ ಉದ್ಘಾಟನೆಯಂಥ ಕಾರ್ಯಕ್ರಮಗಳಲ್ಲಿ ಪ್ರಧಾನಿಯವರು ತೊಡಗಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಪಂಜಾಬ್ನ ಖೇತಿ ಬಚಾವೋ ಯಾತ್ರಾ (ಕೃಷಿ ಉಳಿಸಿ ಯಾತ್ರೆ) ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿಯರವರೇ ಅಟಲ್ ಸುರಂಗದಲ್ಲಿ ನಿಂತು ಕೈ ಬೀಸುವುದನ್ನ ನಿಲ್ಲಿಸಿ, ದೇಶದ ಸಮಸ್ಯೆಗಳ ಬಗ್ಗೆ ಮಾತಾಡಿ, ಮೌನ ಮುರಿಯಿರಿ, ಜನತೆ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಆಗ್ರಹಿಸಿದರು. ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಥ್ರಾಸ್ ಘಟನೆ ನಡೆದು ವಾರ ಕಳೆದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತು ನಿರುದ್ಯೋಗ ಹೆಚ್ಚುತ್ತಿದ್ದು, ಜಿಡಿಪಿ ಕುಸಿಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅನ್ನದಾತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಸಂಸತ್ತಿನಲ್ಲಿ ಅಂಗೀಕಾರವಾದ ಮೂರು ಕಾಯ್ದೆಗಳು ದೇಶದ ಕೃಷಿ ರಚನೆಯನ್ನ ನಾಶಪಡಿಸುವುದರ ಜತೆಗೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರೈತರಿಗೆ ಭಾರಿ ನಷ್ಟವನ್ನುಂಟು ಮಾಡುತ್ತವೆ. ಹಾಗಾಗಿ, ನಾವು ಖೇತಿ ಬಚಾವೋ ಯಾತ್ರೆಯನ್ನು ಮಾಡುತ್ತಿದ್ದು, ರೈತರ ಬಾಳಲ್ಲಿ (ಕಾಲಾ ಕಾನೂನು) ಕತ್ತಲೆ ತರುವ ಕಾನೂನುಗಳನ್ನು ರದ್ದುಪಡಿಸುವಂತೆ ಹೋರಾಟ ನಡೆಸುತ್ತಿದ್ದೇವೆ ಎಂದರು.
ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಧಾನಿ ಮೋದಿಯವರು ಚೀನಾಗೆ 1,200 ಕಿಲೋ ಮೀಟರ್ ಭೂ ಪ್ರದೇಶ ಬಿಟ್ಟುಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.