ಲಡಾಖ್: ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಲಡಾಖ್‌ನ ಲೇಹ್ ಪ್ರದೇಶಕ್ಕೆ ಭೇಟಿ ನೀಡಿ, ಚೀನಾಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಭಾರತಾಂಬೆಯ ವಿರೋಧಿಗಳಿಗೆ ನಮ್ಮ ಯೋಧರ ತಾಕತ್ತು ಗೊತ್ತಾಗಿದೆ. ನಿಮ್ಮ ಶೌರ್ಯದ ಬಗ್ಗೆ ಇದೀಗ ಎಲ್ಲೆಡೆ ಮಾತನಾಡುತ್ತಿದ್ದಾರೆ ಎಂದ ಮೋದಿ ಸೈನಿಕರ ಪರಾಕ್ರಮದ ಗುಣಗಾನ ಮಾಡಿದರು.
ಈ ವೇಳೆ ನಾನು ಇಬ್ಬರು ತಾಯಂದಿರಿಗೆ ನಮಿಸುತ್ತೇನೆ. ಮೊದಲನೆಯದಾಗಿ ಭಾರತಾಂಬೆಗೆ ನಮನ ಹಾಗೂ ಈ ದೇಶಕ್ಕೆ ಯೋಧರನ್ನು ನೀಡಿದ ಪ್ರತಿಯೊಬ್ಬ ತಾಯಿಗೂ ನನ್ನ ನಮನಗಳು ಎಂದು ಏರುಧ್ವನಿಯಲ್ಲಿ ಮೋದಿ ಹೇಳಿದರು. ಇದೇ ವೇಳೆ, ಕಳೆದ ಕೆಲ ದಿನಗಳ ಹಿಂದೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಮತ್ತೊಮ್ಮೆ ಗೌರವ ತಿಳಿಸಿದರು.
ವಿಸ್ತರಣಾವಾದದ ಯುಗ ಅಂತ್ಯವಾಗಿದೆ, ಇದು ಅಭಿವೃದ್ಧಿಯ ಕಾಲ:
ಗಾಲ್ವಾನ್ ಕಣಿವೆ ನಮ್ಮದು. ವಿಸ್ತರಣಾವಾದದ ಯುಗ ಅಂತ್ಯವಾಗಿದೆ. ಇದು ಅಭಿವೃದ್ದಿಯ ಕಾಲ ಎಂದು ಎಂದು ಚೀನಾಗೆ ಪರೋಕ್ಷವಾಗಿ ತಿರುಗೇಟು ಕೊಟ್ಟರು.
ಇಡೀ ದೇಶ ಸೈನಿಕರ ಶೌರ್ಯ ಕೊಂಡಾಡುತ್ತಿದೆ:
ಕಠಿಣ ಪರಿಸ್ಥಿತಿಯಲ್ಲೂ ದೇಶದ ಗಡಿ ರಕ್ಷಣೆ ಮಾಡುತ್ತಿದ್ದೀರಿ. ನಿಮ್ಮ ಶೌರ್ಯದಿಂದ ವಿಶ್ವಕ್ಕೆ ದೇಶದ ಶಕ್ತಿ, ಸಾಮರ್ಥ್ಯ ಗೊತ್ತಾಗಿದೆ. ಇಡೀ ದೇಶಕ್ಕೆ ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸವಿದೆ. ಗಾಲ್ವಾನ್ ಕಣಿವೆಯಲ್ಲಿ ನಮ್ಮ ಯೋಧರು ತೋರಿಸಿದ ಪರಾಕ್ರಮದಿಂದ ಇಡೀ ಭಾರತ ಹೆಮ್ಮೆ ಪಡುತ್ತಿದೆ ಎಂದರು.
ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಭೂಮಿಯಿಂದ 13 ಸಾವಿರ ಅಡಿ ಎತ್ತರದಲ್ಲಿ ಡ್ರ್ಯಾಗನ್ ದೇಶಕ್ಕೆ ಮೋದಿ ಗುದ್ದು:
ಕೊಳಲನ್ನು ನುಡಿಸುವ ಶ್ರೀಕೃಷ್ಣನನ್ನು ಪೂಜಿಸುವವರೂ ನಾವೇ. ಸುದರ್ಶನ ಚಕ್ರವನ್ನು ಹೊಂದಿರುವ ಶ್ರೀಕೃಷ್ಣನನ್ನು ಅನುಸರಿಸುವ ಮತ್ತು ಆರಾಧಿಸುವವರೂ ನಾವೇ ಎಂದು ಹೇಳುತ್ತಾ ಕಾಲು ಕೆರೆದು ಜಗಳಕ್ಕೆ ಬಂದರೆ ತಕ್ಕ ಪಾಠ ಕಲಿಸುವ ಪರೋಕ್ಷ ಬಿಗಿ ಸಂದೇಶ ರವಾನಿಸಿದರು.