ಪಾಟ್ನಾ: ಇದುವರೆಗೂ ಶಾಂತವಾಗಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಕಣ, ಇಂದಿನಿಂದ ರಣರಂಗವಾಗಿ ಬದಲಾಗಲಿದೆ.
ಒಂದೇ ದಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. ಈ ಇಬ್ಬರೂ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿಯಾಗಿ ಮಾತನಾಡಿ ಮತಬೇಟೆ ಆಡಲಿದ್ದಾರೆ. ಶುಕ್ರವಾರದಿಂದ ಬಿಹಾರದಲ್ಲಿ ಚುನಾವಣೆ ಕಣ ಮತ್ತಷ್ಟು ಬಿಸಿಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ 12 ಪ್ರಚಾರ ಸಭೆಗಳಲ್ಲಿ ಭಾಗಿಯಾಗಲಿದ್ದು, ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವರು. ಇಂದು ಬೆಳಗ್ಗಿ 10.30ಕ್ಕೆ ಸಸಾರಾಮ್, ಮಧ್ಯಾಹ್ನ 12.15ಕ್ಕೆ ಭಾಗಲ್ಪುರ್ ಹಾಗೂ ಮಧ್ಯಾಹ್ನ 2.40ಕ್ಕೆ ಗಯಾದಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಇದೇ ತಿಂಗಳ 28ರಂದು ದರ್ಬಾಂಗ್, ಮುಜಾಫರ್ಪುರ್ ಹಾಗೂ ಪಾಟ್ನಾಗಳಲ್ಲಿ ಪ್ರಚಾರ ಕೊನೆಯ ಸುತ್ತಿನ ಮತಬೇಟೆ ನವೆಂಬರ್ 3ರಂದು ಚಾಪ್ರಾ, ಈಸ್ಟ್ ಚಂಪಾರಣ್ಯ ಹಾಗೂ ಸಮಸ್ತಿಪುರ್, ಸಹಸ್ರಾದಲ್ಲಿ ಅಭ್ಯರ್ಥಿಗಳ ಪರ ನಡೆಸಲಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಎರಡು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ನವಾಡಾದ ಹಿಸುವಾ ಮತ್ತು ಭಾಗಲ್‌ಪುರ ಜಿಲ್ಲೆಯ ಕಹಲ್‌ಗಾಂವ್‌ನಲ್ಲಿ ರಾಹುಲ್ ಕಾಂಗ್ರೆಸ್ ಮತ್ತು ಆರ್‌ಜೆಡಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.
ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತಗಳಲ್ಲಿ ಒಟ್ಟು 243 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಹೊರಬೀಳಲಿದೆ.