ನವದೆಹಲಿ : ಭಾರತವು ಆಮದಿನ ಮೇಲಿನ ಅವಲಂಬನೆ ಕಡಿಮೆಗೊಳಿಸಬೇಕು ಮತ್ತು ಅತ್ಯಾಧುನಿಕ ರಕ್ಷಣಾ ಸಾಧನಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ತನ್ನ ದೇಶೀಯ ಸಾಮರ್ಥ್ಯಗಳನ್ನು ಬೆಳೆಸಿಕೊಂಡು "ಮೇಕ್ ಇನ್ ಇಂಡಿಯಾ" ಉಪಕ್ರಮ ಅನುಸರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರರು ಭಾಗವಹಿಸಿದ್ದ ಸಭೆಯಲ್ಲಿ ಕೋವಿಡ್ -19ರ ಹಿನ್ನೆಲೆ ಕ್ಷೀಣಿಸಿರುವ ಆರ್ಥಿಕತೆಗೆ ಉತ್ತೇಜನ ನೀಡುವ ಉಪಕ್ರಮಗಳ ಬಗ್ಗೆ ಮೋದಿ ಚರ್ಚಿಸಿದ್ದಾರೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದು ಬಂದಿದೆ.
ಸಭೆಯು ಆರ್ಡನೆನ್ಸ್ ಕಾರ್ಖಾನೆಗಳ ಕಾರ್ಯನಿರ್ವಹಣೆಯ ಸುಧಾರಣೆ, ಖರೀದಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು, ಕೇಂದ್ರೀಕೃತ ಸಂಪನ್ಮೂಲ ಹಂಚಿಕೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಉತ್ತೇಜಿಸುವುದು, ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಮತ್ತು ರಫ್ತು ಉತ್ತೇಜನಕ್ಕೆ ಸಂಬಂಧ ಪಟ್ಟ ವಿಚಾರಗಳನ್ನು ಒಳಗೊಂಡಿತ್ತು.
ವಿನ್ಯಾಸದಿಂದ ಉತ್ಪಾದನೆಯವರೆಗೆ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿ ಭಾರತವನ್ನು ವಿಶ್ವದ ಉನ್ನತ ರಾಷ್ಟ್ರಗಳ ಪಟ್ಟಿಗೆ ಏರಿಸುವಲ್ಲಿ ಪ್ರಧಾನಿ ಒತ್ತು ನೀಡಿದರು. ಸಾರ್ವಜನಿಕ ಮತ್ತು ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆಯು ಸ್ವಾವಲಂಬನೆ ಮತ್ತು ರಫ್ತುಗಳ ಅವಳಿ ಉದ್ದೇಶಗಳನ್ನು ಪೂರೈಸುತ್ತದೆ.