ನವದೆಹಲಿ: ಇಂದು ಈ ವರ್ಷದ ಕೊನೆಯ ಮನ್ ಕಿ ಬಾತ್ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಎಲ್ಲೆಲ್ಲೂ ಬೇಡಿಕೆಗಳು ಹೆಚ್ಚಾಗುತ್ತಿದೆ. ಕೋವಿಡ್ ನಡುವೆಯೇ ಸ್ವದೇಶಿ ಉತ್ಪನ್ನಗಳ ಬಳಕೆಗೆ ಆದ್ಯತೆ ಹೆಚ್ಚಾಗಿರುವುದು ಸಂತಸದ ವಿಷಯ. ದೇಶದಲ್ಲೇ ಎಲ್ಲಾ ಅಗತ್ಯ ವಸ್ತುಗಳನ್ನು ತಯಾರಿಸಲಾಗುತ್ತಿದೆ. ತಯಾರಿಸುವ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ ಎಂದು ಹೇಳಿದರು.
ದೇಶದ ಕೈಗಾರಿಕೆಗಳಿಗೆ ಆತ್ಮನಿರ್ಭರತೆಯ ಸಾಮರ್ಥ್ಯ: ದೇಶದ ಕೈಗಾರಿಕೆಗಳಲ್ಲಿ ಆತ್ಮನಿರ್ಭರತೆಯ ಸಾಮರ್ಥ್ಯ ಉದಯವಾಗಿದೆ. ದೇಶದಲ್ಲಿ ತಯಾರಿಸಲ್ಪಟ್ಟ ಆಟಿಕೆಗಳಿಗೆ ಬೇಡಿಕೆ ವೃದ್ಧಿಯಾಗಿದೆ. ಝೀರೋ ಎಫೆಕ್ಟ್, ಝೀರೋ ಡಿಫೆಕ್ಟ್ ಯೋಚನೆಯಿಂದ ಕೆಲಸ ಮಾಡುವ ಸಮಯ ಇದಾಗಿದೆ. ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾರ್ಟ್ ಅಪ್‌ಗಳು ಹುಟ್ಟಬೇಕು ಎಂದು ಮೋದಿ ತಿಳಿಸಿದರು.
ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಖರೀದಿಸಿ. ಈ ಹೊಸ ವರ್ಷಕ್ಕೆ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ ಎಂಬ ಸಂಕಲ್ಪ ತೊಡಿ. ನಮ್ಮ ದೇಶದ ಜನರ ಶ್ರಮ ಸ್ವದೇಶಿ ವಸ್ತುಗಳಲ್ಲಿದೆ. ನಿಮ್ಮ ಸಂಕಲ್ಪ ಅವರಿಗೆ ಸಹಾಯಕವಾಗಲಿದೆ ಎಂದರು.
ಕರ್ನಾಟಕದಿಂದ ಬಂದ ಪತ್ರ ಓದಿದ ಪ್ರಧಾನಿ: ಕರ್ನಾಟಕದ ಶ್ರೀರಂಗಪಟ್ಟಣದ ಬಳಿಯ ಮಂದಿರವೊಂದು ಅಸ್ವಚ್ಛತೆಯ ಆವಾಸವಾಗಿತ್ತು. ಇದನ್ನು ಯುವ ಬ್ರಿಗೇಡ್ ಸಂಘಟನೆಯ ಕಾರ್ಯಕರ್ತರು ಸ್ವಚ್ಛಗೊಳಿಸಿರುವುದು ಶ್ಲಾಘನೀಯ. ವಾರಾಂತ್ಯದ ಬಿಡುವಿನ ಸಮಯದಲ್ಲಿ ಯುವ ಬ್ರಿಗೇಡ್ ತಂಡ ಈ ಅದ್ಭುತ ಕಾರ್ಯವನ್ನು ಮಾಡಿದೆ ಎಂದು ಅಭಿನಂದಿಸಿದರು.
ಇದನ್ನೂ ಓದಿ; ಅಂತಾರಾಷ್ಟ್ರೀಯ ಗುಣಮಟ್ಟದ ವಸ್ತುಗಳನ್ನು ತಯಾರಿಸಿ; ಉದ್ಯಮಿಗಳಿಗೆ ಪ್ರಧಾನಿ ಕರೆ
ಕ್ಯಾನ್ ಡು, ವಿಲ್ ಡು: ನಮ್ಮ ದೇಶದ ಯುವಜನರನ್ನು ನೋಡಿದಾಗ ನನಗೆ ಸಂತೋಷವಾಗುತ್ತದೆ. ಭಾರತದ ಯುವ ಜನಾಂಗದಲ್ಲಿ ಕ್ಯಾನ್ ಡು, ವಿಲ್ ಡು ಎಂಬ ಎರಡು ಬಲವಾದ ವಿಶ್ವಾಸಗಳಿವೆ.ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುವ ಛಲವನ್ನು ನಮ್ಮ ದೇಶದ ಯುವಜನರು ಹೊಂದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಶಿಕ್ಷಕರ ತ್ಯಾಗ ಅವಿಸ್ಮರಣೀಯ. ವಿವಿಧ ಪ್ರಯತ್ನಗಳ ಮೂಲಕ ಮಕ್ಕಳಿಗೆ ಪಾಠವನ್ನು ಅರ್ಥ ಮಾಡಿಸಿದ್ದಾರೆ. ನಾನಾ ಪ್ರಯತ್ನಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ ಎಂದರು.
ಕಾಶ್ಮೀರದ ಸೇಬು, ಕೇಸರಿಗೆ ಜಿಐ ಟ್ಯಾಗ್: ಕಣಿವೆ ರಾಜ್ಯವಾದ ಕಾಶ್ಮೀರದ ಸೇಬು ಮತ್ತು ಕೇಸರಿ ಈಗ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ. ಇವುಗಳಿಗೆ ಜಿಐ ಟ್ಯಾಗ್ ದೊರೆತ ಪರಿಣಾಮ ವಿಶ್ವದಾದ್ಯಂತ ಪ್ರಚಾರ ಪಡೆಯಲು ಸಹಾಯವಾಯಿತು. ಜಮ್ಮು ಕಾಶ್ಮೀರದ ಸಮೃದ್ಧ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿ. ಇದೀಗ ದುಬೈನ ಸೂಪರ್ ಮಾರ್ಕೆಟ್ವೊಂದು ಕೇಸರಿ ಮಾರಾಟಕ್ಕೆ ಅಣಿಯಾಗಿದೆ ಎಂದು ಹೆಮ್ಮೆ ಪಟ್ಟರು.